ಬಸ್ತಿ(ಉತ್ತರ ಪ್ರದೇಶ): ಬಸ್ತಿಯ ಸರ್ಕಾರಿ ವಸತಿ ಗೃಹದಲ್ಲಿ ಸಹೋದ್ಯೋಗಿಯೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿ ಕೊಲೆ ಯತ್ನ ನಡೆಸಿರುವುದಾಗಿ ಕಂದಾಯ ಇಲಾಖೆ ಮಹಿಳಾ ಅಧಿಕಾರಿಯೊಬ್ಬರು ಆರೋಪ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪಾವಳಿ ಹಬ್ಬದ ದಿನ ರಾತ್ರಿ ಈ ಘಟನೆ ನಡೆದಿದ್ದು, ಎರಡು ದಿನಗಳ ನಂತರ ಮಹಿಳಾ ಅಧಿಕಾರಿ, ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಪೊಲೀಸರು ಈ ವಿಷಯವನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ. ಆದರೆ ಘಟನೆ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ವಿಡಿಯೋ ರಿಲೀಸ್ ಮಾಡಿ ಸಿಎಂಗೆ ಮನವಿ: ಇದೀಗ ವಿಡಿಯೋ ರಿಲೀಸ್ ಮಾಡಿರುವ ಸಂತ್ರಸ್ತ ಮಹಿಳಾ ಅಧಿಕಾರಿ, ಆರೋಪಿ ನಾಯಬ್ ತಹಶೀಲ್ದಾರ್ ಅವರನ್ನು ಬಂಧಿಸುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಒತ್ತಾಯಿಸಿದ್ದಾರೆ. ವಿಡಿಯೋದಲ್ಲಿ ನಾಯಬ್ ತಹಶೀಲ್ದಾರ್ ಯಾವ ರೀತಿ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ನ್ಯಾಯಕ್ಕಾಗಿ ತಾವು ಯಾವ ರೀತಿ ಪೊಲೀಸ್ ಹಾಗೂ ಉನ್ನತ ಅಧಿಕಾರಿಗಳ ಬಳಿ ಅಲೆಯಬೇಕಾಗಿ ಬಂತು ಎಂಬುದನ್ನೂ ವಿವರಿಸಿದ್ದಾರೆ.
ವಿಡಿಯೋದಲ್ಲಿ ಮಹಿಳೆ ಹೇಳಿರುವಂತೆ, "ನಾಯಬ್ ತಹಶೀಲ್ದಾರ್ ಆಗಿರುವ ತನ್ನ ಸಹೋದ್ಯೋಗಿ ನವೆಂಬರ್ 12ರಂದು ತಾನು ಒಬ್ಬಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿದರು. ನನ್ನ ಕೆನ್ನೆಗೆ ಹೊಡೆದು, ನೆಲಕ್ಕೆ ಬೀಳಿಸಿ, ಅತ್ಯಾಚಾರಕ್ಕೆ ಯತ್ನಿಸಿದರು. ಅದು ಸಾಧ್ಯವಾಗದೇ ಇದ್ದಾಗ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದರು" ಎಂದು ಆರೋಪಿಸಿದ್ದಾರೆ.
"ನಾನು ಮೂರ್ಛೆ ಹೋಗಿದ್ದೇನೆ ಎಂದುಕೊಂಡು ಆತ ಹಾಲ್ ಕಡೆ ಹೋದರು. ಆಗ ನಾನು ಮಂಚದ ಕೆಳಗೆ ಅವಿತುಕೊಂಡೆ, ನಂತರ ಬಾಗಿಲಿನ ಕಡೆಗೆ ಓಡಿಹೋಗಿ ಬಾಗಿಲು ಹಾಕಿಕೊಂಡೆ. ಭಯದಿಂದ ಮೂರು ದಿನ ಮನೆಯಲ್ಲೇ ಇದ್ದೆ. ನಂತರ ನನ್ನ ತಂದೆ ತಾಯಿ ಮನೆಗೆ ತೆರಳಿ ಘಟನೆಯ ಬಗ್ಗೆ ತಿಳಿಸಿದ್ದೇನೆ" ಎಂದು ದೂರಿನಲ್ಲಿ ಹಾಗೂ ವಿಡಿಯೋದಲ್ಲಿ ವಿವರಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ), 511(ಅಪರಾಧಗಳ ಯತ್ನ), 307(ಕೊಲೆ ಯತ್ನ) ಹಾಗೂ 453(ಅತಿಕ್ರಮಣ) ಅಡಿ ಎಫ್ಐಆರ್ ದಾಖಲಿಸಲಾಗಿದೆ. ನಾಯಬ್ ತಹಶೀಲ್ದಾರ್ ಹಾಗೂ ಮಹಿಳಾ ಅಧಿಕಾರಿ ಒಂದೇ ಕಚೇರಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಅವರಿಬ್ಬರ ವಸತಿಗೃಹಗಳು ಅಕ್ಕಪಕ್ಕದಲ್ಲೇ ಇವೆ. ಮೂಲಗಳ ಪ್ರಕಾರ ಇಬ್ಬರೂ ಆಗಾಗ್ಗೆ ವಾಟ್ಸ್ಆ್ಯಪ್ನಲ್ಲಿ ಚ್ಯಾಟ್ ಮಾಡುತ್ತಿದ್ದರು. ದೀಪಾವಳಿ ದಿನ ಅಧಿಕಾರಿ ಬಲವಂತವಾಗಿ ಮಹಿಳಾ ಅಧಿಕಾರಿಯನ್ನು ಭೇಟಿಯಾಗಲು ಹೋಗಿದ್ದಾರೆ. ಆರೋಪಿ ಅಧಿಕಾರಿಯ ಮೊಬೈಲ್ ಲೊಕೇಷನ್ ಪತ್ತೆ ಹಚ್ಚಲಾಗುತ್ತಿದೆ. ಘಟನೆಯಲ್ಲಿ ಮೂರನೇ ವ್ಯಕ್ತಿ ಕೂಡ ಭಾಗಿಯಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಪೋಕ್ಸೊ ಪ್ರಕರಣ: ಮತ್ತೆ ಮುರುಘಾ ಶರಣರನ್ನು ಬಂಧಿಸಿದ ಪೊಲೀಸರು