ಕೋಲ್ಕತ್ತಾ (ಪಶ್ಚಿಮ ಬಂಗಾಳ):ವಿಶ್ವವಿದ್ಯಾಲಯದಲ್ಲಿ ರ್ಯಾಗಿಂಗ್ನಲ್ಲಿ ತೊಡಗಿಸಿಕೊಂಡು ಆರೋಪಿ ವಿದ್ಯಾರ್ಥಿಗಳಿಗೆ ಕೋಲ್ಕತ್ತಾ ಹೈಕೋರ್ಟ್ ಬಿಸಿ ಮುಟ್ಟಿಸಿದೆ. ಸಂತ್ರಸ್ತ ವಿದ್ಯಾರ್ಥಿನಿಯ ವೈದ್ಯಕೀಯ ಚಿಕಿತ್ಸಾ ವೆಚ್ಚ ತುಂಬುವಂತೆ ಉಚ್ಛ ನ್ಯಾಯಾಲಯ ಆರೋಪಿಗಳಿಗೆ ಆದೇಶಿಸಿದೆ.
ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ಅವರಿದ್ದ ನ್ಯಾಯ ಪೀಠವು ವಿದ್ಯಾರ್ಥಿಗಳ ರ‍್ಯಾಗಿಂಗ್ ಕೃತ್ಯವನ್ನು ಖಂಡಿಸಿದೆ. ಶೈಕ್ಷಣಿಕ ಸಂಸ್ಥೆಯಲ್ಲಿ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳಿಗೆ ಯಾವುದೇ ಕ್ಷಮೆ ಇಲ್ಲ ಎಂದು ಹೇಳಿದೆ. ಅಲ್ಲದೇ, ಈ ಚಟುವಟಿಕೆಗಳನ್ನು ತಡೆಯಲು ಮತ್ತು ಇದು ಪುನರಾವರ್ತನೆಯಾಗದಂತೆ ಕ್ರಮ ವಹಿಸಬೇಕೆಂದೂ ನ್ಯಾಯ ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ:ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ರ‍್ಯಾಗಿಂಗ್ ಮಾಡಿದ ಹಿನ್ನೆಲೆಯಲ್ಲಿ ಆರೋಪಿ ವಿದ್ಯಾರ್ಥಿಗಳಿಗೆ ಬಿ.ಟೆಕ್ ಎಂಟನೇ ಸೆಮಿಸ್ಟರ್ ಪರೀಕ್ಷೆಗೆ ಕುಳಿತುಕೊಳ್ಳದಂತೆ ಆಡಳಿತ ಮಂಡಳಿ ನಿರ್ಬಂಧ ಹೇರಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿ ನ್ಯಾಯಾಲಯ ಈ ಆದೇಶ ನೀಡಿದೆ. ಇದೇ ವೇಳೆ, ಸೆಮಿಸ್ಟರ್ ಪರೀಕ್ಷೆಗಳನ್ನು ತೆಗೆದುಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ.
ಆದರೆ, ಪರೀಕ್ಷೆ ಬರೆಯುವ ಉದ್ದೇಶವನ್ನು ಹೊರತುಪಡಿಸಿ ಬೇರೆ ಕಾರಣಗಳಿಗೆ ವಿಶ್ವವಿದ್ಯಾಲಯವನ್ನು ಪ್ರವೇಶಿಸಲು ಆರೋಪಿಗಳಿಗೆ ಅವಕಾಶ ಇಲ್ಲ. ಪರೀಕ್ಷಾ ಸಾಮಗ್ರಿಗಳು ಬೇಕಾದರೆ ವಿದ್ಯಾರ್ಥಿಗಳ ಪೋಷಕರು ವಿಶ್ವವಿದ್ಯಾಲಯಕ್ಕೆ ತೆಗೆದುಕೊಂಡು ಬರಲಿ ಎಂದು ಹೇಳಿದೆ.
ಇದನ್ನೂ ಓದಿ:ವಂಚನೆ ಬಯಲು.. ವರ್ಷದ ಹಿಂದೆ ಸತ್ತ ವ್ಯಕ್ತಿ ಹೆಸರಿನಲ್ಲಿ ಪಾವತಿಯಾಗ್ತಿತ್ತು ಡಯಾಲಿಸಿಸ್ ಮಾಡಿದ ಬಿಲ್!