ಮುಂಬೈ:ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸತ್ಯವನ್ನು ಮಾತನಾಡುತ್ತಿಲ್ಲ. ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಆರೋಪಿಸಿದ್ದಾರೆ.
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರ ಆರೋಪಗಳ ವಿಚಾರದ ಬಗ್ಗೆ ಮಾತನಾಡಿದ ಫಡ್ನವಿಸ್, ಪತ್ರದಲ್ಲಿ ಉಲ್ಲೇಖಿಸಲಾದ ದಿನಾಂಕಗಳಲ್ಲಿ ದೇಶ್ಮುಖ್ ಅವರು ನಾಗ್ಪುರದ ಮನೆಯಲ್ಲಿ ಕ್ವಾರಂಟೈನ್ನಲ್ಲಿದ್ದರು ಎಂಬುದನ್ನು ತಳ್ಳಿ ಹಾಕಿದ್ದಾರೆ. ಗೃಹ ಸಚಿವರು ಮುಂಬೈನಲ್ಲೇ ಇದ್ದರು ಎಂದು ಕೆಲ ದಾಖಲೆಗಳನ್ನು ತೋರಿಸಿ ಹೇಳಿದ್ದಾರೆ.
ಇದನ್ನೂ ಓದಿ: ಅಲ್ಲಿರುವುದು 'ಮಹಾರಾಷ್ಟ್ರ ವಸೂಲಿ ಅಘಾಡಿ' ಸರ್ಕಾರ; ಸಿ.ಟಿ. ರವಿ
ಪ್ರಸ್ತುತ ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್ ಆಗಿ ನೇಮಕಗೊಂಡಿರುವ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಮಾಡಿದ್ದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದು, ಅಮಾನತುಗೊಂಡ ಎಪಿಐ ಸಚಿನ್ ವಾಜೆ ಅವರಿಗೆ ಪ್ರತಿ ತಿಂಗಳು 100 ಕೋಟಿ ರೂ. ವಸೂಲಿ ಮಾಡುವಂತೆ ಅನಿಲ್ ದೇಶ್ಮುಖ್ ಹೇಳಿದ್ದರು ಎಂದು ಆರೋಪಿಸಿದ್ದರು.
ಶೀಘ್ರದಲ್ಲೆ ವರ್ಗಾವಣೆ ದಂಧೆ ಬಯಲು
ಐಪಿಎಸ್ ಅಧಿಕಾರಿಗಳು ಸೇರಿದಂತೆ ನಿಯಮ ಉಲ್ಲಂಘಿಸಿ ಮಹಾರಾಷ್ಟ್ರ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಾಗಿರುವುದಕ್ಕೆ ಸಾಕ್ಷಿ ನನ್ನ ಬಳಿ ಇದೆ. 6.3 ಜಿಬಿ ಕಾಲ್ ರೆಕಾರ್ಡಿಂಗ್ ಡೇಟಾ ಹಾಗೂ ವರ್ಗಾವಣೆ ದಂಧೆಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಕೇಂದ್ರ ಗೃಹ ಕಾರ್ಯದರ್ಶಿ ಅವರಿಗೆ ಶೀಘ್ರದಲ್ಲೇ ಹಸ್ತಾಂತರಿಸುವೆ ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.