ಪುಣೆ (ಮಹಾರಾಷ್ಟ್ರ):ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಕೇಂದ್ರ ಸರ್ಕಾರ ಮತ್ತು ಉದ್ಯಮಿ ಗೌತಮ್ ಅದಾನಿ ವಿರುದ್ಧ ತೀವ್ರ ಹೋರಾಟ ನಡೆಸುತ್ತಿದ್ದರೆ, ಕೂಟದ ಭಾಗವಾಗಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅದಾನಿ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಪುಣೆ ಜಿಲ್ಲೆಯ ಬಾರಾಮತಿಯಲ್ಲಿನ ವಿದ್ಯಾ ಪ್ರತಿಷ್ಠಾನದ ಇಂಜಿನಿಯರಿಂಗ್ ವಿಭಾಗದಲ್ಲಿ ರೋಬೋಟಿಕ್ ಲ್ಯಾಬ್ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಅವರು, ಬಾರಾಮತಿಯಲ್ಲಿ ಹೊಸ ತಂತ್ರಜ್ಞಾನ ಕೇಂದ್ರದ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ಕಾರ್ಯ ಪ್ರಶಂಸನೀಯ ಎಂದು ಹೇಳಿದರು. ಈ ವೇಳೆ ಫಿನೊಲೆಕ್ಸ್ ಜೆ ಪವರ್ ಸಿಸ್ಟಮ್ಸ್ ಲಿಮಿಟೆಡ್‌ನ ಅಧ್ಯಕ್ಷ ದೀಪಕ್ ಚಬಾರಿಯಾ ಅವರು ಉಪಸ್ಥಿತರಿದ್ದರು.
ಅದಾನಿ 25 ಕೋಟಿ ರೂಪಾಯಿ ಹೂಡಿಕೆ:ವಿದ್ಯಾ ಪ್ರತಿಷ್ಠಾನ ಸಂಸ್ಥೆಯು ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದೆ. ತಂತ್ರಜ್ಞಾನದಿಂದಾಗಿ ಎಂಜಿನಿಯರಿಂಗ್ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ಅಭಿವೃದ್ಧಿ ಸಾಧಿಸಲು ಬದಲಾವಣೆಗಳಿಗೆ ಒಗ್ಗಿಕೊಳ್ಳಬೇಕು. ಅಂತಹ ತಂಡವನ್ನು ರೂಪಿಸುವುದು ಅತ್ಯವಶ್ಯಕ. ಕೃತಕ ಬುದ್ಧಿಮತ್ತೆಗಾಗಿ ಮೊದಲ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಇದರ ಕಾರ್ಯ ನಡೆಯುತ್ತಿದ್ದು, ಯೋಜನೆಗೆ 25 ಕೋಟಿ ರೂಪಾಯಿ ವೆಚ್ಚವಾಗಲಿದೆ. ಅದೃಷ್ಟವಶಾತ್ ಇಬ್ಬರು ಉದ್ಯಮಿಗಳು ಆರ್ಥಿಕ ಬೆಂಬಲ ನೀಡಿದ್ದಾರೆ ಎಂದು ಶರದ್ ಪವಾರ್ ಹೇಳಿದರು.
ನಿರ್ಮಾಣ ಕ್ಷೇತ್ರದಲ್ಲಿನ ಪ್ರಮುಖ ಕಂಪನಿಯಾದ ಫಸ್ಟ್ ಸಿಫೋಟೆಕ್ 10 ಕೋಟಿ ರೂಪಾಯಿಗಳೊಂದಿಗೆ ಯೋಜನೆಗೆ ಸಹಾಯ ಮಾಡಲು ನಿರ್ಧರಿಸಿದೆ. ಇದಕ್ಕಾಗಿ ಅವರಿಗೆ ಧನ್ಯವಾದ ಹೇಳಲು ಬಯಸುವೆ. ಜೊತೆಗೆ ಖ್ಯಾತ ಉದ್ಯಮಿ, ದೇಶದ ಸಿರಿವಂತ ವ್ಯಕ್ತಿ ಗೌತಮ್ ಅದಾನಿ ಅವರು ಕೂಡ ಯೋಜನೆಯಲ್ಲಿ 25 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಇದರಿಂದ ಕೆಲಸವೂ ಪ್ರಾರಂಭವಾಗಿದೆ ಎಂದು ಪವಾರ್ ಹೇಳಿದರು.