ಕೃಷ್ಣಾ (ಆಂಧ್ರ ಪ್ರದೇಶ): ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಜನಸೇನಾ ಪಕ್ಷ ಹೊರ ಬರಲು ನಿರ್ಧರಿಸಿದೆ ಎಂಬ ಊಹಾಪೋಹಗಳ ಬಗ್ಗೆ ಸ್ವತಃ ಪಕ್ಷದ ಅಧ್ಯಕ್ಷ, ನಟ ಪವನ್ ಕಲ್ಯಾಣ್ ಸ್ಪಷ್ಟನೆ ನೀಡಿದ್ದಾರೆ. ನಾವು ಎನ್‌ಡಿಎ ಮೈತ್ರಿಕೂಟದಿಂದ ನಾವು ಹೊರಬಂದಿದ್ದೇವೆ ಎಂದು ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಮುದಿನೆಪಲ್ಲಿ ಮಂಡಲದಲ್ಲಿ ಗುರುವಾರ ನಡೆದ 'ವರಾಹಿ ಯಾತ್ರೆ'ಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದರು. ಸರಿಯಾಗಿ ಒಂದು ರಸ್ತೆಯನ್ನೂ ಮಾಡಿಸಲಾಗದ ಸಿಎಂ ಜಗನ್ ಮತ್ತೊಮ್ಮೆ ತಮಗೆ ಅಧಿಕಾರ ನೀಡಬೇಕೆಂದು ಹೇಗೆ ಕೇಳುತ್ತಾರೆ?. 2024ರಲ್ಲಿ ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಹಾಗೂ ಜನಸೇನಾ ಪಕ್ಷದ ಸರ್ಕಾರದ ಅಧಿಕಾರಕ್ಕೆ ಬರುತ್ತದೆ ಎಂದು ಪವನ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:Janasena and TDP alliance: ಆಂಧ್ರ ಪ್ರದೇಶದ ಚುನಾವಣೆಗೆ ಜನಸೇನಾ-ಟಿಡಿಪಿ ಮೈತ್ರಿ.. ಪವನ್ ಕಲ್ಯಾಣ್ ಘೋಷಣೆ
ಇದೇ ವೇಳೆ, ನಾವು (ಜನಸೇನಾ) ಎನ್‌ಡಿಎ ಮೈತ್ರಿಕೂಟದಿಂದ ಹೊರಬರುವ ಅಗತ್ಯ ಬಿದ್ದರೆ, ಇದನ್ನು ಮೊದಲಿಗೆ ಜಗನ್ ಮತ್ತು ಇತರ ವೈಎಸ್‌ಆರ್‌ಸಿಪಿ ನಾಯಕರಿಗೆ ತಿಳಿಸುತ್ತೇನೆ. ನಾವು ಎನ್‌ಡಿಎ ಜೊತೆ ಇದ್ದರೆ ನಿಮಗೇನು?... ಅದರಿಂದ ಹೊರ ಬಂದರೆ ನಿಮಗೇನು?. ನೀವು ನಿಮ್ಮ ಪಕ್ಷದ ಬಗ್ಗೆ ಕಾಳಜಿ ವಹಿಸಿ. ನಮ್ಮ ಬಗ್ಗೆ ನಿಮಗೆ ಭಯವೇಕೆ ಹೇಳಿ. ನಮ್ಮನ್ನು ಕಂಡು ನೀವು ಭಯಪಡುತ್ತೀರಿ ಎಂದರೆ, ನೀವು ದುರ್ಬಲಗೊಳ್ಳುತ್ತಿದ್ದೀರಿ ಎಂದೇ ಅರ್ಥ ಎಂದು ಜನಸೇನಾ ನಾಯಕ ವಾಗ್ಬಾಣ ಬಿಟ್ಟರು.