ಪಾಟ್ನಾ(ಬಿಹಾರ್):ಆರ್‌ಎಸ್‌ಎಸ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಪಾಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ(ಎಸ್ಎಸ್‌ಪಿ) ಮಾನವಜೀತ್ ಸಿಂಗ್ ಧಿಲ್ಲೋನ್ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, 24 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಜಿತೇಂದ್ರ ಸಿಂಗ್ ಗಂಗ್ವಾರ್ ನೀಡಿರುವ ನೋಟಿಸ್‌ನಲ್ಲಿ, "ಎಸ್‌ಎಸ್‌ಪಿ ಸಾರ್ವಜನಿಕವಾಗಿ ಏಕೆ ಇಂತಹ ಹೇಳಿಕೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು" ಎಂದು ತಿಳಿಸಿದ್ದಾರೆ.
ನಿಷೇಧಿತ ಸಂಘಟನೆ ಪಿಎಫ್‌ಐ ಜೊತೆ ಸಂಬಂಧ ಹೊಂದಿರುವ ಮೂವರು ಶಂಕಿತ ಉಗ್ರರನ್ನು ಪಾಟ್ನಾ ಪೊಲೀಸರು ನಿನ್ನೆಯಷ್ಟೇ ಬಂಧಿಸಿದ್ದರು. ಈ ಮೂಲಕ ದೇಶದ್ರೋಹ ಪ್ರಕರಣವನ್ನು ಬಯಲಿಗೆಳೆದಿದ್ದರು. ಇದಾದ ನಂತರ ಎಸ್‌ಎಸ್‌ಪಿ ಧಿಲ್ಲೋನ್ ಅವರು ತೀವ್ರಗಾಮಿ ಸಂಘಟನೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದೊಂದಿಗೆ ಹೋಲಿಸಿ ಮಾಧ್ಯಮಗಳಿಗೆ ಪ್ರಕರಣದ ಮಾಹಿತಿ ನೀಡಿದರು.
ಪೊಲೀಸ್ ಅಧಿಕಾರಿ ಹೇಳಿದ್ದೇನು? "ಈ ತೀವ್ರವಾದಿ ಸಂಘಟನೆಯು ಮೂಲತಃ ಮಸೀದಿ ಮತ್ತು ಮದರಸಾಗಳಲ್ಲಿ ಯುವಕರನ್ನು ಸಜ್ಜುಗೊಳಿಸುತ್ತಿತ್ತು. ಅವರು ನಿರಂತರವಾಗಿ ಮೂಲಭೂತವಾದದ ಕಡೆಗೆ ಕೆಲಸ ಮಾಡುತ್ತಿದ್ದರು. ಅವರ ಕಾರ್ಯವೈಖರಿ ಆರ್‌ಎಸ್‌ಎಸ್‌ನ ಶಾಖೆಯಂತಿದೆ. ಆರ್‌ಎಸ್‌ಎಸ್ ತಮ್ಮ ಕಾರ್ಯಕರ್ತರಿಗೆ ಹೇಗೆ ತರಬೇತಿ ನೀಡುತ್ತಿದೆಯೋ ಅದೇ ರೀತಿ ಪಿಎಫ್‌ಐ ಕೂಡಾ ತರಬೇತಿ ನೀಡುತ್ತಿದೆ. ಪಿಎಫ್‌ಐ ದೈಹಿಕ ತರಬೇತಿಯ ಹೆಸರಿನಲ್ಲಿ ಯುವಕರನ್ನು ಬ್ರೈನ್‌ವಾಶ್ ಮಾಡುವ ಕೆಲಸ ಮಾಡುತ್ತಿದೆ" ಎಂದು ಧಿಲ್ಲೋನ್ ಹೇಳಿದ್ದರು.