ಪಾಟ್ನಾ (ಬಿಹಾರ) :ಫುಲ್ವಾರಿಶರೀಫ್ನಲ್ಲಿ ನೆಲೆಸಿರುವ ದಲಿತ ಕುಟುಂಬದ ಪುತ್ರನೊಬ್ಬ ತನ್ನ ಭವಿಷ್ಯವನ್ನು ಅಮೆರಿಕದಲ್ಲಿ ರೂಪಿಸಿಕೊಳ್ಳಲಿದ್ದಾನೆ. ಪಾಟ್ನಾದ ಗೊನ್‌ಪುರ ಗ್ರಾಮದ 17 ವರ್ಷದ ಪ್ರೇಮ್ ಕುಮಾರ್ ಅಮೆರಿಕದ ಪ್ರತಿಷ್ಠಿತ ಲಫಯೆಟ್ಟೆ ಕಾಲೇಜ್‌ನಲ್ಲಿ ಅಧ್ಯಯನಕ್ಕಾಗಿ 2.5 ಕೋಟಿ ರೂ. ಪಡೆದಿದ್ದಾರೆ. ಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ದಲಿತ ವಿದ್ಯಾರ್ಥಿ ಪ್ರೇಮ್ ಆಗಿದ್ದಾರೆ. ಲಫಯೆಟ್ಟೆ ಕಾಲೇಜಿನಿಂದ ಪ್ರತಿಷ್ಠಿತ 'ಡಯರ್ ಫೆಲೋಶಿಪ್' ಪಡೆಯುವ ವಿಶ್ವದ 6 ವಿದ್ಯಾರ್ಥಿಗಳಲ್ಲಿ ಇವರೂ ಒಬ್ಬರಾಗಲಿದ್ದಾರೆ. ಪ್ರೇಮ್ ಬಿಹಾರದ ಮಹಾದಲಿತ್ ಮುಸಾಹರ್ ಸಮುದಾಯದಿಂದ ಬಂದವರು. ಇವರ ಕುಟುಂಬ ಈಗಲೂ ತುತ್ತಿನ ಊಟಕ್ಕೂ ಕಷ್ಟಪಡುತ್ತಿದೆ.
2.5 ಕೋಟಿ ಶಿಷ್ಯವೇತನ: ಪ್ರೇಮ್ ಪಾಟ್ನಾದ ಸಂಸ್ಥೆಯೊಂದಕ್ಕೆ ಸೇರಿಕೊಂಡು ಕಳೆದ ನಾಲ್ಕು ವರ್ಷಗಳಿಂದ ವಿದ್ಯಾಭ್ಯಾಸ ಮಾಡುತ್ತಿದ್ದ. ಕೆಲ ದಿನಗಳ ಹಿಂದೆಯಷ್ಟೇ ಅಮೆರಿಕದ ಪ್ರತಿಷ್ಠಿತ ಕಾಲೇಜ್ ಲಫಾಯೆಟ್ಟೆಗೆ ಆಯ್ಕೆಯಾಗಿರುವ ಬಗ್ಗೆ ಸ್ವತಃ ಸಂಸ್ಥೆಯಿಂದಲೇ ಮಾಹಿತಿ ಸಿಕ್ಕಿದೆ. ಈ ಮೂಲಕ ಪದವಿ ವ್ಯಾಸಂಗ ಮಾಡಲು ಕಾಲೇಜಿನಿಂದ 2.5 ಕೋಟಿ ರೂಪಾಯಿ ಶಿಷ್ಯವೇತನ ಪಡೆದಿದ್ದಾರೆ. ಈ ವಿದ್ಯಾರ್ಥಿವೇತನವು ಅಧ್ಯಯನದ ಸಂಪೂರ್ಣ ವೆಚ್ಚ ಮತ್ತು ಜೀವನ ವೆಚ್ಚವನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ಬೋಧನಾ ಶುಲ್ಕ, ನಿವಾಸ, ಪುಸ್ತಕಗಳು, ಆರೋಗ್ಯ ವಿಮೆ, ಪ್ರಯಾಣ ವೆಚ್ಚಗಳು ಇತ್ಯಾದಿ ಇರಲಿದೆ.
1826 ರಲ್ಲಿ ಸ್ಥಾಪಿತವಾದ ಲಫಯೆಟ್ಟೆ ಕಾಲೇಜ್ ಅಮೆರಿಕದ ಅಗ್ರ 25 ಕಾಲೇಜುಗಳಲ್ಲಿ ಒಂದಾಗಿದೆ. ಇದನ್ನು ಅಮೆರಿಕದ 'ಹಿಡನ್ ಐವಿ' ಕಾಲೇಜುಗಳ ವರ್ಗದಲ್ಲಿ ಪರಿಗಣಿಸಲಾಗುತ್ತದೆ. ಇನ್ನು ಪ್ರಪಂಚದ ಕಠಿಣ ಸಮಸ್ಯೆಗಳನ್ನು ಪರಿಹರಿಸಲು ಆಂತರಿಕ ಪ್ರೇರಣೆ ಮತ್ತು ಬದ್ಧತೆಯನ್ನು ಹೊಂದಿರುವ ಆಯ್ದ ವಿದ್ಯಾರ್ಥಿಗಳಿಗೆ ಮಾತ್ರ ಈ ಲಫಯೆಟ್ಟೆ ಈ ಫೆಲೋಶಿಪ್ ನೀಡುತ್ತದೆ.
ನನ್ನ ಹೆತ್ತವರು ಎಂದಿಗೂ ಶಾಲೆಗೆ ಹೋಗಿಲ್ಲ. ಇದು ನನಗೂ ನಂಬಲಸಾಧ್ಯವಾದ ವಿಷಯ. ದಲಿತ ಮಕ್ಕಳಿಗಾಗಿ ಕೆಲಸ ಮಾಡುತ್ತಿರುವ ಡೆಕ್ಸ್ಟೆರಿಟಿ ಗ್ಲೋಬಲ್ ಸಂಸ್ಥೆಯು ಅತ್ಯಂತ ಶ್ಲಾಘನೀಯವಾಗಿದೆ. ಇದರಿಂದಲೇ ನಾನು ಇಂದು ಈ ಯಶಸ್ಸನ್ನು ಪಡೆದಿದ್ದೇನೆ ಎಂದಿದ್ದಾರೆ ಪ್ರೇಮ್ ಕುಮಾರ್.