ಪಾಟ್ನಾ(ಬಿಹಾರ):ಜು.13 ರಂದುಬಿಜೆಪಿ ಸಂಸದರು, ಶಾಸಕರು ಹಾಗೂ ಕಾರ್ಯಕರ್ತರ ಮೇಲೆ ನಡೆದ ಲಾಠಿಚಾರ್ಜ್ ಪ್ರಕರಣ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ. ಇದರ ವಿರುದ್ಧ ಬಿಜೆಪಿ ಮುಖಂಡರೊಬ್ಬರು ಪಾಟ್ನಾದ ಸಿವಿಲ್ ಕೋರ್ಟ್(ಸಿಜಿಎಂ)ನಲ್ಲಿ ದೂರು ದಾಖಲಿಸಿದ್ದಾರೆ.
ಗುರುವಾರ(ಜು.13) ಪಾಟ್ನಾದ ಗಾಂಧಿ ಮೈದಾನದಲ್ಲಿ ಬಿಜೆಪಿಯಿಂದ ಮೆರವಣಿಗೆ ನಡೆಸಲಾಯಿತು. ಈ ವೇಳೆ, ಪಾಟ್ನಾದ ಡಾಕ್ ಬಂಗಲೆಯ ಕ್ರಾಸಿಂಗ್‌ನಲ್ಲಿ ಕೋಲಾಹಲ ಉಂಟಾಯಿತು. ಆಗ ಬಿಜೆಪಿ ಮುಖಂಡರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ನಂತರ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಲಾಠಿ ಚಾರ್ಜ್‌ನಲ್ಲಿ ಹಲವು ಬಿಜೆಪಿ ಸಂಸದರು, ಶಾಸಕರು ಮತ್ತು ಮುಖಂಡರು ಗಾಯಗೊಂಡಿದ್ದರು. ಅದೇ ಸಮಯದಲ್ಲಿ ವಿಜಯ್ ಕುಮಾರ್ ಸಿಂಗ್ ಎಂಬ ಬಿಜೆಪಿ ನಾಯಕ ಸಾವನಪ್ಪಿದ್ದರು. ವಿಜಯ್ ಸಿಂಗ್ ಸಾವಿಗೆ ಪೊಲೀಸ್ ಲಾಠಿಚಾರ್ಜ್ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಪೊಲೀಸರು ಅದನ್ನು ನಿರಾಕರಿಸಿದ್ದಾರೆ. ಘಟನೆಯಲ್ಲಿ ಹಲವು ಪೊಲೀಸರಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ.
ಸಿಎಂ,ಡಿಸಿಎಂ ಸೇರಿದಂತೆ 6 ಜನರ ವಿರುದ್ಧ ದೂರು: ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಡಿಎಂ ಚಂದ್ರಶೇಖರ್, ಎಸ್‌ಎಸ್‌ಪಿ ರಾಜೀವ್ ಕುಮಾರ್ ಮಿಶ್ರಾ ಸೇರಿದಂತೆ 6 ಜನರ ವಿರುದ್ಧ ಸಿಜಿಎಂ ನ್ಯಾಯಾಲಯಕ್ಕೆ ದೂರು ನೀಡಲಾಗಿದೆ. ಬಿಜೆಪಿ ಮುಖಂಡ ಕೃಷ್ಣ ಸಿಂಗ್ ಮತ್ತು ಅವರ ಪರ ವಕೀಲ ಸುನೀಲ್ ಕುಮಾರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸೆಕ್ಷನ್ 302, ಸೆಕ್ಷನ್ 307, ಸೆಕ್ಷನ್ 341, ಸೆಕ್ಷನ್ 323, 354, 120 ಬಿ, 34 ವಿವಿಧ ವಿಭಾಗಗಳಲ್ಲಿ ಪ್ರಕರಣ ದಾಖಲಾಗಿವೆ.
"ಬಿಜೆಪಿ ಮೆರವಣಿಗೆ ಗಾಂಧಿ ಮೈದಾನದಿಂದ ವಿಧಾನಸಭೆಗೆ ಹೋಗಬೇಕಿತ್ತು. ಇದರಲ್ಲಿ ಬಿಹಾರ ಮತ್ತು ಕೇಂದ್ರದ ಅನೇಕ ನಾಯಕರು ಉಪಸ್ಥಿತರಿದ್ದರು. ನಾಯಕರನ್ನು ಬರ್ಬರವಾಗಿ ಕೊಲ್ಲಲಾಯಿತು. ಘಟನೆ ಸಂಬಂಧ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಕೊತ್ವಾಲಿ ಪೊಲೀಸ್ ಠಾಣೆಯ ಮುಖ್ಯಸ್ಥರ ವಿರುದ್ಧ ದೂರು ದಾಖಲು ಮಾಡಲಾಗಿದೆ" ಎಂದು ಬಿಜೆಪಿ ಪರ ವಕೀಲ ಸುನಿಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ.