ಪಾಟ್ನಾ(ಬಿಹಾರ): ಪಾಟ್ನಾ ಹೈಕೋರ್ಟ್ ಎಲ್ಲ ನ್ಯಾಯಾಧೀಶರಿಗೆ ಆ್ಯಪಲ್ ಐಫೋನ್ 13 ಪ್ರೊ ಒದಗಿಸಲು ಮುಂದಾಗಿದ್ದು, ಇದಕ್ಕಾಗಿ ಟೆಂಡರ್ ಕೂಡ ಕರೆಯಲಾಗಿದೆ.
ಆ್ಯಪಲ್ ಐಫೋನ್ 13 ಪ್ರೊ ಖರೀದಿ ಸಂಬಂಧ ಹೈಕೋರ್ಟ್‌ನ ವಿಶೇಷ ಕರ್ತವ್ಯ ಅಧಿಕಾರಿ ಕಚೇರಿಯಿಂದ ಮಂಗಳವಾರ ಅಧಿಕೃತ ಟೆಂಡರ್ ಆದೇಶ ಹೊರಡಿಸಲಾಗಿದೆ. ಟೆಂಡರ್ ಪ್ರಕಾರ, ಪ್ರತಿಷ್ಠಿತ ಸಂಸ್ಥೆಗಳು, ಅಧಿಕೃತ ವಿತರಕರು, ಪೂರೈಕೆದಾರರು ತಮ್ಮ ಕೊಟೇಷನ್ ಅನ್ನು ವಿಶೇಷ ಕರ್ತವ್ಯಾಧಿಕಾರಿಯ ಕಚೇರಿಯಲ್ಲಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಬಿಡ್ದಾರರು ತಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಜಿಎಸ್‌ಟಿ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇತರ ಅಗತ್ಯ ದಾಖಲೆಗಳನ್ನೂ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಜೊತೆಗೆ ಫೋನ್ ಪೂರೈಕೆದಾರ ಕಂಪನಿಗೆ ಮುಂಗಡವಾಗಿ ಯಾವುದೇ ಹಣ ಪಾವತಿಸುವುದಿಲ್ಲ ಎಂದೂ ಹೈಕೋರ್ಟ್ ಷರತ್ತು ಕೂಡ ಹಾಕಿದೆ.