ಪಾಟ್ನಾ: ಬಿಹಾರ ಸರ್ಕಾರದ ಜಾತಿ ಆಧಾರಿತ ಸಮೀಕ್ಷೆಯನ್ನು ಪಾಟ್ನಾ ಹೈಕೋರ್ಟ್ ಎತ್ತಿ ಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಪಾರ್ಥ ಸಾರಥಿ ಅವರಿದ್ದ ವಿಭಾಗೀಯ ಪೀಠ, ಬಿಹಾರ ಸರ್ಕಾರದ ಜಾತಿ ಆಧಾರಿತ ಸಮೀಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ವಜಾಗೊಳಿಸಿದೆ. ಈ ಮೂಲಕ ಇದೀಗ ಜಾತಿ ಗಣತಿ ವಿಚಾರದಲ್ಲಿ ನಿತೀಶ್ ಸರ್ಕಾರಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಇದರಿಂದ ರಾಜ್ಯದಲ್ಲಿ ಜಾತಿ ಗಣತಿ ನಡೆಸಲು ನಿತೀಶ್ ಸರ್ಕಾರಕ್ಕೆ ಅನುಮತಿ ಸಿಕ್ಕಂತಾಗಿದೆ.
ರಾಜ್ಯದಲ್ಲಿ ನಿತೀಶ್ ಕುಮಾರ್ ನಡೆಸಲು ನಿರ್ಧರಿಸಿದ್ದ ಜಾತಿ ಆಧಾರಿತ ಸಮೀಕ್ಷೆಯನ್ನು ವಿರೋಧಿಸಿ ಪ್ರತಿಪಕ್ಷಗಳು ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಿದ್ದವು. ಇದೀಗ ಹೈಕೋರ್ಟ್ ಅರ್ಜಿಗಳನ್ನು ವಜಾಗೊಳಿಸಿರುವ ಕಾರಣ ವಿರೋಧ ಪಕ್ಷಗಳು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ತಯಾರಿ ನಡೆಸಿವೆ ಎಂದು ವಕೀಲರು ತಿಳಿಸಿದ್ದಾರೆ.
ಇದಕ್ಕೂ ಮುನ್ನ 2023ರ ಜುಲೈ 3 ರಿಂದ ಸತತ ಐದು ದಿನಗಳ ಕಾಲ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದಿತ್ತು. ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ. ವಿ. ಚಂದ್ರನ್ ಅವರ ವಿಭಾಗೀಯ ಪೀಠ ಅಂದು ತೀರ್ಪನ್ನು ಕಾಯ್ದಿರಿಸಿದ್ದು, ಇಂದು ಕೋರ್ಟ್ ತೀರ್ಪು ನೀಡಿದೆ.
ಇಲ್ಲಿಯವರೆಗೂ ನಡೆದಿದ್ದೇನು?: ಬಿಹಾರದಲ್ಲಿ ಕಳೆದ ವರ್ಷವಷ್ಟೇ ಜಾತಿ ಗಣತಿ ಆರಂಭಿಸಲು ನಿತೀಶ್ ಕುಮಾರ್ ಸರ್ಕಾರ ನಿರ್ಧರಿಸಿತ್ತು. ಜೂನ್ 9, 2022 ರಂದು, ಬಿಹಾರ ಸರ್ಕಾರವು ಜಾತಿ ಆಧಾರಿತ ಸಮೀಕ್ಷೆ ನಡೆಸಲು ಅಧಿಸೂಚನೆಯನ್ನು ಹೊರಡಿಸಿತ್ತು. 500 ಕೋಟಿಗೆ ಸರ್ಕಾರ ಸಂಪುಟದಲ್ಲಿ ಈ ಸಮೀಕ್ಷೆಗೆ ಅನುಮೋದನೆಯನ್ನು ನೀಡಿತ್ತು. ಬಿಹಾರದಲ್ಲಿ ಜನವರಿ 7, 2023 ರಿಂದ ಜಾತಿ ಗಣತಿಯ ಪ್ರಕ್ರಿಯೆ ಪ್ರಾರಂಭವಾಗಿತ್ತು. ಎರಡನೇ ಹಂತದ ಕೆಲಸ ಏಪ್ರಿಲ್ 15 ರಿಂದ ಪ್ರಾರಂಭವಾಗಿ ಮೇ 15 ರೊಳಗೆ ಪೂರ್ಣಗೊಳ್ಳಬೇಕಿತ್ತು.
ಪಾಟ್ನಾ ಹೈಕೋರ್ಟ್ ನಿಷೇಧ ಹೇರಿತ್ತು:ಆದರೆ ಆ ಮಧ್ಯೆ ಪಾಟ್ನಾ ಹೈಕೋರ್ಟ್ ರಾಜ್ಯ ಸರ್ಕಾರ ನಡೆಸುತ್ತಿದ್ದ ಜಾತಿ ಮತ್ತು ಆರ್ಥಿಕ ಸಮೀಕ್ಷೆಯನ್ನು ನಿಷೇಧಿಸಿಮಧ್ಯಂತರ ತಡೆಯಾಜ್ಞೆ ನೀಡಿತ್ತು. ಜಾತಿಗಳ ಆಧಾರದ ಮೇಲೆ ಜನಗಣತಿ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸುವುದು ಕಾನೂನು ಬಾಧ್ಯತೆಯೇ? ಈ ಹಕ್ಕು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆಯೇ ಅಥವಾ ಇಲ್ಲವೇ? ಇದರೊಂದಿಗೆ ಸಾಮಾನ್ಯ ನಾಗರಿಕರ ಖಾಸಗಿತನಕ್ಕೆ ಧಕ್ಕೆಯಾಗುವುದಿಲ್ಲವೇ ಎಂದು ನ್ಯಾಯಾಲಯ ಪ್ರಶ್ನಿಸಿ, ತಡೆಯಾಜ್ಞೆ ನೀಡಿತ್ತು.
ಸುಪ್ರೀಂ ಮೊರೆ ಹೋಗಿದ್ದ ಸರ್ಕಾರ: ಪಾಟ್ನಾ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆಯನ್ನು ಪ್ರಶ್ನಿಸಿ ಬಿಹಾರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಆದರೆ ಸುಪ್ರೀಂ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತು. ಪಾಟ್ನಾ ಹೈಕೋರ್ಟ್ ಈ ವಿಷಯದ ಬಗ್ಗೆ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಆದ್ದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಈ ವಿಷಯವನ್ನು ಆಲಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಜಾತಿ ಗಣತಿಯನ್ನು ನಡೆಸುತ್ತಿಲ್ಲ. ಆದರೆ ಜನರ ಆರ್ಥಿಕ ಸ್ಥಿತಿ ಮತ್ತು ಅವರ ಜಾತಿಗೆ ಸಂಬಂಧಿಸಿದ ಮಾಹಿತಿಯನ್ನು ಮಾತ್ರ ಸಂಗ್ರಹಿಸುತ್ತಿದ್ದಾರೆ. ಇದರಿಂದ ಅವರಿಗೆ ಉತ್ತಮ ಸೇವೆ ನೀಡಲು ಸರ್ಕಾರವು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಪಾಟ್ನಾ ಹೈಕೋರ್ಟ್ಗೆ ಹೇಳಿದ್ದರು.
ಇದನ್ನೂ ಓದಿ:ಜುಲೈ 3 ರವರೆಗೆ ಜಾತಿ ಗಣತಿಗೆ ಮಧ್ಯಂತರ ತಡೆ: ಪಾಟ್ನಾ ಹೈಕೋರ್ಟ್ ಆದೇಶ