ಪಾಟ್ನಾ(ಬಿಹಾರ):ಸಹಾರಾ ಇಂಡಿಯಾದಲ್ಲಿ ಹೂಡಿಕೆ ಮಾಡಿದವರಿಗೆ ವಂಚನೆ ಆರೋಪದ ಪ್ರಕರಣಗಳ ವಿಚಾರಣೆಗೆ ಹಲವು ಸಮನ್ಸ್ ನೀಡಿದರೂ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಹಾರಾ ಗ್ರೂಪ್ ಅಧ್ಯಕ್ಷ ಸುಬ್ರತಾ ರಾಯ್ ವಿರುದ್ಧ ಪಾಟ್ನಾ ಹೈಕೋರ್ಟ್ ಶುಕ್ರವಾರ ಬಂಧನ ವಾರಂಟ್ ಜಾರಿ ಮಾಡಿದೆ. ಅಲ್ಲದೇ, ಮುಂದಿನ ವಿಚಾರಣೆಯನ್ನು ಮೇ 16 ಕ್ಕೆ ಮುಂದೂಡಿದೆ.
ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ವಿರುದ್ಧ ವಂಚನೆ ಆರೋಪ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪಾಟ್ನಾ ಹೈಕೋರ್ಟ್ ವಿಚಾರಣೆ ನಡಸುತ್ತಿದ್ದು, ಸುಬ್ರತಾ ರಾಯ್ ಖುದ್ದು ಹಾಜರಿಗೆ ಕೋರ್ಟ್ ಹಲವು ಬಾರಿ ನೋಟಿಸ್ ನೀಡಿತ್ತು. ಆದರೆ, ಈವರೆಗೂ ರಾಯ್ ಕೋರ್ಟ್ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ರಾಯ್ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿದೆ.
ಸುಬ್ರತಾ ರಾಯ್ ವಿರುದ್ಧ ದಾಖಲಾದ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂದೀಪ್ ಕುಮಾರ್ ಪೀಠ, ಸಹಾರಾ ಇಂಡಿಯಾದಲ್ಲಿ ಹೂಡಿಕೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಕುರಿತಾಗಿ ಸುಬ್ರತಾ ರಾಯ್‌ಗೆ ಯಾವುದೇ ರಿಯಾಯಿತಿ ಇಲ್ಲ. ನಿಗದಿತ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.
ಸಹಾರಾ ಇಂಡಿಯಾ ವಂಚನೆಗೆ ಸಂಬಂಧಿಸಿದಂತೆ 2 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪಾಟ್ನಾ ಹೈಕೋರ್ಟ್‌ನಲ್ಲಿ ದಾಖಲಾಗಿವೆ. ಸುಬ್ರತಾ ರಾಯ್ರಿಂದ ವಂಚನೆಗೊಳಗಾದವರ ನಿಜವಾದ ಸಂಖ್ಯೆ ಲಕ್ಷಗಳಷ್ಟಿದ್ದು, ಅವರಲ್ಲಿ ಹಲವರು ಈಗಾಗಲೇ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶ ಪೊಲೀಸರು ಇತ್ತೀಚೆಗೆ ಸುಬ್ರತಾ ರಾಯ್ ಅವರನ್ನು ಬಂಧಿಸಲು ಜಾಮೀನು ರಹಿತ ವಾರಂಟ್‌ನೊಂದಿಗೆ ಲಖನೌಗೆ ತಲುಪಿದರು. ಆದರೆ, ಬಂಧಿಸುವಲ್ಲಿ ವಿಫಲರಾಗಿದ್ದರು. ಇದೀಗ ಪಾಟ್ನಾ ಕೋರ್ಟ್ ಕೂಡ ಬಂಧನ ವಾರಂಟ್ ಜಾರಿ ಮಾಡಿದೆ.
ಓದಿ:ಏರ್ ಇಂಡಿಯಾ ಸಿಇಒ, ಎಂಡಿ ಆಗಿ ಕ್ಯಾಂಪ್‌ಬೆಲ್ ವಿಲ್ಸನ್ ನೇಮಕ