ಪಾಟ್ನಾ(ದೆಹಲಿ):ವಿಮಾನದ ಎಡ ರೆಕ್ಕೆಗೆ ಬೆಂಕಿ ಸ್ಪರ್ಶಿಸಿದ ಕಾರಣ ಸ್ಪೈಸ್ಜೆಟ್ ವಿಮಾನ ಪಾಟ್ನಾದ ಏರ್ಪೋರ್ಸ್ ಸ್ಟೇಷನ್‌ನಲ್ಲಿ ತುರ್ತು ಭೂ ಸ್ಪರ್ಶಿಸಿತು. ಈ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ವಿಮಾನದಲ್ಲಿದ್ದ 185 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ವಿಮಾನದ ಎಡಭಾಗದ ರೆಕ್ಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ವಿಮಾನವನ್ನು ಕೆಳಗಿಳಿಸಲಾಯಿತು. ವಿಮಾನದ ಎರಡೂ ಬ್ಲೇಡ್ಗಳು ಬಾಗಿದ್ದು, ರೆಕ್ಕೆಗಳಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಗಮನಿಸಿದ ಫುಲ್ವಾರಿ ಶರೀಫ್ನ ಜನ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಎಚ್ಚರಿಸಿದ್ದರು ಎಂದು ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಹೇಳಿದರು.
ಬೋಯಿಂಗ್ 727 ಸ್ಪೈಸ್ಜೆಟ್ನಲ್ಲಾದ ಅಗ್ನಿ ಅವಘಡಕ್ಕೆ ತಾಂತ್ರಿಕ ದೋಷವೇ ಕಾರಣ ಎಂದು ಶಂಕಿಸಲಾಗಿದ್ದು, ಎಂಜಿನಿಯರಿಂಗ್ ತಂಡ ಹೆಚ್ಚಿನ ತನಿಖೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
12.30ಕ್ಕೆ ಪಾಟ್ನಾದಿಂದ ವಿಮಾನ ಟೇಕಾಫ್ ಆದ ಸಮಯದಿಂದ ವಿಮಾನದಲ್ಲಿ ಏನೋ ಸಮಸ್ಯೆ ಆಗಿದೆ ಎಂದು ಅನಿಸುತ್ತಿತ್ತು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ. ಮತ್ತೊಬ್ಬ ಪ್ರಯಾಣಿಕ, "ಪ್ರಯಾಣದ ಸಮಯದಲ್ಲಿ ವಿಮಾನದ ಒಳಗಿನ ದೀಪಗಳು ಮಿನುಗಲು ಪ್ರಾರಂಭಿಸಿದವು. ಫ್ಲೈಟ್ ಟೇಕ್ ಆಫ್ ಆದ ಸಮಯದಿಂದ ವಿಮಾನದಲ್ಲಿ ಏನೋ ಸಮಸ್ಯೆ ಆಗಿದೆ ಎಂದು ನಾವು ಭಾವಿಸಿದ್ದೆವು. ಇದು ಸಂಪೂರ್ಣವಾಗಿ ಸ್ಪೈಸ್ಜೆಟ್ನ ನಿರ್ಲಕ್ಷ್ಯ" ಎಂದು ದೂರಿದ್ದಾರೆ.
ವರದಿಗಳ ಪ್ರಕಾರ, ವಿಮಾನವು ಸಾಮಾನ್ಯ ಹಾರುವ ಎತ್ತರವನ್ನು ತಲುಪಲು ಬಹಳ ಹೆಣಗಾಡಿತ್ತು. ಪಾಟ್ನಾದ ಬಿಹ್ತಾ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ತುರ್ತು ಭೂಸ್ಪರ್ಶ ಮಾಡುವ ಮೊದಲು ವಿಮಾನ ಸುಮಾರು 25 ನಿಮಿಷಗಳ ಕಾಲ ಗಾಳಿಯಲ್ಲೇ ಇದ್ದು, ಭೂಸ್ಪರ್ಶ ಮಾಡಲು ದೀರ್ಘ ಸಮಯಾವಕಾಶವನ್ನು ತೆಗೆದುಕೊಂಡಿತ್ತು. ಲ್ಯಾಂಡಿಂಗ್ ನಂತರ, ಪೊಲೀಸರು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ ವಿಮಾನದ ಬಳಿಗೆ ಬಂದು ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಿದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ, ಇದು ಪ್ರಯಾಣಿಕರ ಜೀವದೊಂದಿಗೆ ಆಡಿದ ಚೆಲ್ಲಾಟ ಎಂದಿದ್ದಾರೆ.
ಇದನ್ನೂ ಓದಿ :ವಾಹನ ಸವಾರರೇ ಎಚ್ಚರ! ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಮನೆಗೆ ಬರುತ್ತೆ ನೋಟಿಸ್