ಜಮುಯಿ(ಬಿಹಾರ):ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಗಳ ಆಗರ ಎಂಬುದು ಬಿಹಾರದಲ್ಲಿ ಮತ್ತೆ ಸಾಬೀತಾಗಿದೆ. ಗಾಯಗೊಂಡು ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಆಸ್ಪತ್ರೆ ಸಿಬ್ಬಂದಿ ಮೂತ್ರ ವಿಸರ್ಜಿಸಲು ಮೂತ್ರ ಚೀಲದ ಬದಲಾಗಿ ತಂಪು ಪಾನೀಯದ ಬಾಟಲ್ ನೀಡಿದ್ದಾರೆ. ಇದು ಟೀಕೆಗೆ ಗುರಿಯಾಗಿದೆ. ಬಿಹಾರದ ಜಮುಯಿ ಸದರ್ ಆಸ್ಪತ್ರೆಯಲ್ಲಿ ಈ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.
ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಾಗಿದ್ದ ರೋಗಿಗೆ ಮೂತ್ರ ಚೀಲದ ಬದಲು ತಂಪು ಪಾನೀಯದ ಬಾಟಲಿಯನ್ನು ಆಸ್ಪತ್ರೆ ಸಿಬ್ಬಂದಿ ನೀಡಿದ್ದಾರೆ . ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ.
ಘಟನೆಯ ವಿವರ:60 ವರ್ಷದ ವ್ಯಕ್ತಿಯೊಬ್ಬರು ಗಾಯಗೊಂಡು ನಗರದ ರೈಲ್ವೆ ಹಳಿಯ ಪಕ್ಕದಲ್ಲಿ ಬಿದ್ದಿದ್ದರು. ಪೊಲೀಸರು ಕರೆತಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ತೀವ್ರವಾಗಿ ಗಾಯಗೊಂಡಿರುವ ವೃದ್ಧರಿಗೆ ಮೂತ್ರ ವಿಸರ್ಜನೆಗೆ ನೀಡಬೇಕಿದ್ದ ಚೀಲದ ಬದಲಿಗೆ ನಳಿಕೆ ಇರುವ ಕೂಲ್ಡ್ರಿಂಗ್ಸ್ ಬಾಟಲ್ ಅನ್ನುಆಸ್ಪತ್ರೆ ಸಿಬ್ಬಂದಿ ಜೋಡಿಸಿದ್ದಾರೆ. ಇದನ್ನು ಆಸ್ಪತ್ರೆಯಲ್ಲಿದ್ದವರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಅವ್ಯವಸ್ಥೆಯ ಅನಾವರಣ:ಸದರ್ ಜಿಲ್ಲಾಸ್ಪತ್ರೆಯ ವ್ಯವಸ್ಥೆಗಳ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆಗೆ ದೂರು ನೀಡಲಾಗಿದ್ದರೂ ಬದಲಾವಣೆ ಮಾತ್ರ ಶೂನ್ಯ. ಜೊತೆಗೆ ಈ ವಿಚಿತ್ರ ಪ್ರಕರಣ ಅವ್ಯವಸ್ಥೆಯನ್ನು ತೆರೆದಿಟ್ಟಿದೆ. ವಿಡಿಯೋ ವೈರಲ್ ಆಗಿದ್ದು, ಆಸ್ಪತ್ರೆ ವಿರುದ್ಧ ಜನರು ಛೀಮಾರಿ ಹಾಕುತ್ತಿದ್ದಾರೆ. ಅಲ್ಲದೇ, ಹಳೆಯ ಘಟನೆಗಳನ್ನು ಮೆಲುಕು ಹಾಕಿ ಟೀಕಿಸುತ್ತಿದ್ದಾರೆ.
ತನಿಖೆ ನಡೆಸಿ ಕ್ರಮ:ಸದರ್ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅವಘಡ ಚರ್ಚೆಯಾಗುತ್ತಲೇ ಇರುತ್ತದೆ. ಮೂತ್ರದ ಚೀಲದ ಜಾಗದಲ್ಲಿ ತಂಪು ಪಾನೀಯದ ಬಾಟಲಿಯನ್ನು ಜೋಡಿಸಿರುವುದು ಗಂಭೀರ ವಿಷಯವಾಗಿದೆ. ಇದರಿಂದ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದನ್ನು ಅದು ತೋರಿಸುತ್ತದೆ. ಆದರೆ, ಅನೇಕ ದಿನಗಳಿಂದ ಆಸ್ಪತ್ರೆಯ ಸ್ಟಾಕ್‌ನಲ್ಲಿ ಮೂತ್ರದ ಚೀಲಗಳು ಖಾಲಿಯಾಗಿವೆ. ತಂಪು ಪಾನೀಯದ ಬಾಟಲಿ ನೀಡಿರುವುದು ಅಪರಾಧ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟ ಆರೋಗ್ಯ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆಯ ಮ್ಯಾನೇಜರ್ ರಮೇಶ್ ಪಾಂಡೆ ತಿಳಿಸಿದ್ದಾರೆ.
ಈ ಹಿಂದೆಯೂ ಆಸ್ಪತ್ರೆಯಲ್ಲಿ ಹಲವಾರು ಅಪಭ್ರಂಶಗಳು ನಡೆದು ಟೀಕೆಗೆ ಗುರಿಯಾಗಿದ್ದವು. ಆಸ್ಪತ್ರೆಯನ್ನು ಸುಸ್ಥಿತಿಯಲ್ಲಿಡಬೇಕಾದ ಆರೋಗ್ಯ ಇಲಾಖೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಬಾಲಕಿ ಪ್ರೀತಿ ಬಲೆಗೆ ಕೆಡವಿ, ಸಾಮೂಹಿಕ ಅತ್ಯಾಚಾರ ಎಸಗಿದರು.. ವಿಡಿಯೋ ಮಾಡಿ ವೈರಲ್ ಮಾಡಿದ ಕಿರಾತಕರು!