ನವದೆಹಲಿ: ಸಾಮಾಜಿಕ ಜಾಲತಾಣಗಳ ಕ್ರೇಜ್ ವಯಸ್ಕರಲ್ಲಿ ಮಾತ್ರವಲ್ಲದೇ ಮಕ್ಕಳಲ್ಲೂ ತುಂಬಾ ಹೆಚ್ಚಾಗಿದೆ. 13 ವರ್ಷದ ಬಾಲಕನೊಬ್ಬ ತನ್ನ ನೆಚ್ಚಿನ ಯೂಟ್ಯೂಬರ್ನ ಭೇಟಿ ಮಾಡಲೆಂದು ಪಂಜಾಬ್ನ ಪಟಿಯಾಲದಿಂದ ಸೈಕಲ್‌ನಲ್ಲಿ 300 ಕಿ.ಮೀ ಪ್ರಯಾಣಿಸಿ ದೆಹಲಿಗೆ ಬಂದಿದ್ದಾರೆ.
ಜನಪ್ರಿಯ ಯೂಟ್ಯೂಬರ್ ನಿಶಾಯ್ ಮಲ್ಹಾನ್ ಅವರ ವಿಡಿಯೋದಿಂದ ಸ್ಫೂರ್ತಿ ಪಡೆದಿದ್ದ ಬಾಲಕ, ಆತನನ್ನು ಭೇಟಿಯಾಗಲು ನಿರ್ಧರಿಸಿದ್ದರು. ಇದಕ್ಕಾಗಿ ಅಕ್ಟೋಬರ್ 4ರಂದು ಶಾಲೆಗೆ ಹೋಗುವ ಬದಲು ಸೈಕಲ್‌ನಲ್ಲಿ ದೆಹಲಿಗೆ ಹೊರಟಿದ್ದಾರೆ. ಸುಮಾರು 300 ಕಿ.ಮೀ. ದೂರವನ್ನು ಬಾಲಕ ಮೂರು ದಿನಗಳ ಕಾಲ ಕ್ರಮಿಸಿದ್ದಾರೆ. ಆದರೆ, ಯೂಟ್ಯೂಬರ್ ನಿಶಾಯ್ ಮಲ್ಹಾನ್ ದುಬೈಗೆ ಹೋಗಿದ್ದರಿಂದ ದೆಹಲಿಯಲ್ಲಿ ಬಾಲಕನಿಗೆ ಭೇಟಿಯಾಗಲು ಸಾಧ್ಯವಾಗಿಲ್ಲ.
ಮತ್ತೊಂದೆಡೆ ಬಾಲಕ ಮರಳಿ ಮನೆ ಬಾರದ ಹಿನ್ನೆಲೆಯುಲ್ಲಿ ಪೋಷಕರು ಪಟಿಯಾಲ ಪೊಲೀಸರಿಗೆ ದೂರು ನೀಡಿದ್ದಾರೆ. ಪಟಿಯಾಲ ಪೊಲೀಸರು ತನಿಖೆ ಆರಂಭಿಸಿ, ನಂತರ ದೆಹಲಿಯ ವಾಯುವ್ಯ ಪೊಲೀಸರಿಗೆ ಬಾಲಕ ದೆಹಲಿಗೆ ಬಂದಿರುವ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಅಂತೆಯೇ, ದೆಹಲಿಯ ಪಿತಾಂಪುರದಲ್ಲಿರುವ ಯೂಟ್ಯೂಬರ್ ನಿಶಾಯ್ ಮಲ್ಹಾನ್ ಮನೆ ಸಮೀಪದ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಆಗ ಬಾಲಕ ಸೈಕಲ್ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ನಂತರ ಪೊಲೀಸರು ಶೋಧ ಕಾರ್ಯ ನಡೆಸಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಬಾಲಕನನ್ನು ಪತ್ತೆ ಹಚ್ಚಿಸಿದ್ದಾರೆ. ಅಲ್ಲದೇ, ಕುಟುಂಬಕ್ಕೆ ಬಾಲಕನನ್ನು ಒಪ್ಪಿಸಲಾಗಿದೆ ಎಂದು ಡಿಸಿಪಿ ಉಷಾ ರಂಗಾನಿ ತಿಳಿಸಿದ್ದಾರೆ.
ಇದನ್ನೂ ಓದಿ:ಮಗನಿಗೆ ಕಚ್ಚಿದ ಎರಡು ಸರ್ಪಗಳು: ಚಿಕಿತ್ಸೆ ಕೊಡಿಸಲು ಹಾವುಗಳ ಸಮೇತ ಆಸ್ಪತ್ರೆಗೆ ಬಂದ ತಂದೆ