ಅನಂತನಾಗ್/ಜಮ್ಮು-ಕಾಶ್ಮೀರ: ಮಾರ್ಚ್ 25, 2000 ರಲ್ಲಿ ನಡೆಸಿದ ಪತ್ರಿಬಲ್ ನಕಲಿ ಎನ್ಕೌಂಟರ್ ಘಟನೆ ನಡೆದು 21 ವರ್ಷಗಳು ಕಳೆದಿವೆ. ಪ್ರಕರಣವು ಮುಕ್ತಾಯಗೊಂಡಿದ್ದರೂ ಸಹ ಸಂತ್ರಸ್ತರ ಕುಟುಂಬಗಳು ಇಂದಿಗೂ ನ್ಯಾಯಕ್ಕಾಗಿ ಕಾಯುತ್ತಿವೆ. ಪ್ರಕರಣವನ್ನು ಮತ್ತೆ ತೆರೆಯಲು ಮತ್ತು ಮರುಪರಿಶೀಲಿಸಲು ಸಂತ್ರಸ್ತರ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಾರ್ಚ್ 25, 2000 ರಂದು, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪತ್ರಿಬಲ್ ಪ್ರದೇಶದಲ್ಲಿ ಐದು ವಿದೇಶಿ ಉಗ್ರರನ್ನು ಹತ್ಯೆ ಮಾಡಿರುವುದಾಗಿ ಸೇನೆಯು ಹೇಳಿಕೊಂಡಿತ್ತು. ಅವರು ಚಟ್ಟಿಸಿಂಗ್‌ಪೊರಾ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದಾರೆಂದು ಸೇನೆಯು ತಿಳಿಸಿತ್ತು. ಆದರೆ, ಸೇನೆಯಿಂದ ಹತ್ಯೆಗೊಳಗಾದವರು ವಿದೇಶಿ ಉಗ್ರರಲ್ಲ ಬದಲಿಗೆ ಐದು ಜನರು ಸ್ಥಳೀಯ ಗ್ರಾಮಸ್ಥರು ಎನ್ನಲಾಗಿತ್ತು. ಮಾರ್ಚ್ 20, 2000 ರಂದು, ಅಂದಿನ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಭಾರತ ಭೇಟಿಯ ಮುನ್ನಾ ದಿನದಂದು ಚಟ್ಟಿಸಿಂಗ್‌ಪೊರಾದಲ್ಲಿ 35 ಸಿಖ್ಖರನ್ನು ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದರು. ಘಟನೆ ನಡೆದ 5 ದಿನಗಳ ನಂತರ, 35 ಸಿಖ್ಖರ ಹತ್ಯೆಯಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಐವರು "ಉಗ್ರರನ್ನು" ಕೊಂದಿರುವುದಾಗಿ ಸೇನೆ ಹೇಳಿಕೊಂಡಿತ್ತು.