ಕೋಯಿಕ್ಕೋಡ್ (ಕೇರಳ): ಮಕ್ಕಳ ಕಳ್ಳಸಾಗಣೆ ಆರೋಪದ ಮೇಲೆ ಕೋಯಿಕ್ಕೋಡ್ ರೈಲ್ವೆ ಪೊಲೀಸರು ಪಾದ್ರಿ ಮತ್ತು ಇಬ್ಬರು ರಾಜಸ್ಥಾನ ಮೂಲದ ಆರೋಪಿಗಳನ್ನು ಬಂಧಿಸಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರೊಂದಿಗೆ ಪೊಲೀಸರು ಕೋಯಿಕ್ಕೋಡ್ ರೈಲು ನಿಲ್ದಾಣದಲ್ಲಿ 12 ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಾರೆ. ಈ ಮಕ್ಕಳನ್ನು ರಾಜಸ್ಥಾನದಿಂದ ಯಾವುದೇ ಮಾನ್ಯ ದಾಖಲೆಗಳಿಲ್ಲದೇ ಪೆರಂಬವೂರ್‌ನ ಪುಲ್ಲುವಾಜಿ ಮೂಲದ ಕ್ರಿಶ್ಚಿಯನ್ ಹೋಮ್ ಕರುಣಾ ಭವನಕ್ಕೆ ಕರೆತರಲಾಗಿತ್ತು.
ಕರುಣಾ ಭವನದ ನಿರ್ದೇಶಕ ಪಾದ್ರಿ ಜೇಕಬ್ ವರ್ಗೀಸ್ ಮತ್ತು ರಾಜಸ್ಥಾನದ ದಲ್ಲಾಳಿಗಳಾದ ಲೋಕೇಶ್ ಕುಮಾರ್ ಮತ್ತು ಶ್ಯಾಮ್ ಲಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕರುಣಾ ಭವನ ಚಾರಿಟಬಲ್ ಟ್ರಸ್ಟ್ ಯಾವುದೇ ಅನುಮತಿ ಇಲ್ಲದೇ ನಡೆಯುತ್ತಿದೆ. ಈ ಹಿಂದೆಯೂ ಇದೇ ಗ್ಯಾಂಗ್ ಮಕ್ಕಳನ್ನು ಕಳ್ಳಸಾಗಣೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಕಳ್ಳಸಾಗಾಣಿಕೆಗೆ ಒಳಗಾದ ಹೆಣ್ಣು ಮಕ್ಕಳನ್ನು ರೈಲ್ವೆ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಕೋಯಿಕ್ಕೋಡ್ ರೈಲು ನಿಲ್ದಾಣದಲ್ಲಿ ಓಕಾ ಎಕ್ಸ್‌ಪ್ರೆಸ್‌ನಿಂದ ರಕ್ಷಣೆ ಮಾಡಿದ್ದಾರೆ. ನಂತರ ಮಕ್ಕಳನ್ನು ಸಮಿತಿಗೆ ಹಸ್ತಾಂತರಿಸಲಾಗಿದೆ. ನಂತರ ಇಲ್ಲಿಂದ ರಾಜಸ್ಥಾನ ಮಕ್ಕಳ ಕಲ್ಯಾಣ ಸಮಿತಿ ಮೂಲಕ ಮಕ್ಕಳನ್ನು ಪೋಷಕರಿಗೆ ಹಸ್ತಾಂತರಿಸಲಾಗುತ್ತದೆ.