ಬೆಂಗಳೂರು : ಕಕ್ಷೆಯಲ್ಲಿ ಸುತ್ತುತ್ತಿರುವ ನಿಷ್ಕ್ರಿಯಗೊಂಡಿರುವ ಉಪಗ್ರಹವೊಂದನ್ನು ಮರಳಿ ಭೂಮಿಗೆ ತರುವ ಕಾರ್ಯಾಚರಣೆಗೆ ಇಸ್ರೋ ಸಿದ್ಧತೆ ಮಾಡಿಕೊಂಡಿದೆ. ಕಡಿಮೆ ಭೂ ಕಕ್ಷೆಯಲ್ಲಿ ಸುತ್ತುತ್ತಿರುವ ಮೇಘಾ ಟ್ರಾಪಿಕಸ್-1 (MT-1) ಇದನ್ನು ಭೂಮಿಗೆ ಮರಳಿಸಲಾಗುತ್ತಿದೆ. ಈ ಉಪಗ್ರಹವನ್ನು ಅಕ್ಟೋಬರ್ 12, 2011 ರಂದು ಇಸ್ರೋ ಹಾಗೂ ಫ್ರೆಂಚ್ ಬಾಹ್ಯಾಕಾಶ ಸಂಸ್ಥೆಗಳ ಜಂಟಿ ಯೋಜನೆಯಡಿ ಉಡಾವಣೆ ಮಾಡಲಾಗಿತ್ತು. ಇದು ಉಷ್ಣವಲಯದ ಹವಾಮಾನ ಮತ್ತು ಪರಿಸರ ಅಧ್ಯಯನಕ್ಕಾಗಿ ಹಾರಿಬಿಟ್ಟ ಉಪಗ್ರಹವಾಗಿದೆ.
ಪೆಸಿಫಿಕ್ ಮಹಾಸಾಗರದಲ್ಲಿ 5° S ನಿಂದ 14° S ಅಕ್ಷಾಂಶ ಮತ್ತು 119° W ನಿಂದ 100° W ರೇಖಾಂಶದ ನಡುವಿನ ಜನವಸತಿಯಿಲ್ಲದ ಪ್ರದೇಶವನ್ನು MT1 ಗಾಗಿ ಉದ್ದೇಶಿತ ಮರು ಪ್ರವೇಶ ವಲಯ ಎಂದು ಗುರುತಿಸಲಾಗಿದೆ. ಭೂಮಿಗೆ ಬರಲಿರುವ ಉಪಗ್ರಹ ಸುಮಾರು 1000 ಕೆಜಿ ತೂಕ ಹೊಂದಿದೆ. ಈಗಲೂ ಉಪಗ್ರಹದಲ್ಲಿ ಸುಮಾರು 125 ಕೆಜಿ ಇಂಧನ ಬಳಕೆಯಾಗದೆ ಉಳಿದಿದೆ, ಇದು ಆಕಸ್ಮಿಕವಾಗಿ ವಿಘಟನೆಯ ಅಪಾಯವನ್ನುಂಟುಮಾಡುತ್ತದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪೆಸಿಫಿಕ್ ಮಹಾಸಾಗರದಲ್ಲಿ ಜನವಸತಿ ಇಲ್ಲದ ಸ್ಥಳದಲ್ಲಿ ಉಪಗ್ರಹವನ್ನು ಇಳಿಸಲು ಈ ಉಳಿದ ಇಂಧನವು ಸಾಕಾಗುತ್ತದೆ ಎಂದು ಅಂದಾಜಿಸಲಾಗಿದೆ. ನಿಯಂತ್ರಿತ ಮರು ಪ್ರವೇಶ ಕಾರ್ಯಾಚರಣೆಯಲ್ಲಿ ನಿರ್ದಿಷ್ಟ ಸುರಕ್ಷಿತ ಪ್ರದೇಶದಲ್ಲಿಯೇ ಉಪಗ್ರಹ ಇಳಿಯುವುದನ್ನು ಖಾತ್ರಿಪಡಿಸುವ ಸಲುವಾಗಿ ಉಪಗ್ರಹವು ಅತ್ಯಂತ ಕಡಿಮೆ ಎತ್ತರದ ಕಕ್ಷೆಯಲ್ಲಿ ಸುತ್ತುತ್ತಿರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
ಅಪಾಯ ಆಗದಂತೆ ಮುನ್ನೆಚ್ಚರಿಕೆ:ಸಾಮಾನ್ಯವಾಗಿ ಮರು ಪ್ರವೇಶದ ನಂತರ ವಾಯು ಉಷ್ಣ ವಿಘಟನೆಯಿಂದ ಕೆಲವೊಮ್ಮೆ ಯಾವುದೇ ಪರಿಣಾಮವಾಗದ ಸಾಧ್ಯತೆ ಇರುವುದರಿಂದ ದೊಡ್ಡ ಉಪಗ್ರಹಗಳು ಮತ್ತು ರಾಕೆಟ್ ಬಿಡಿಭಾಗಗಳಿಂದ ಭೂಮಿಯ ಮೇಲಿದ್ದವರಿಗೆ ಯಾವುದೇ ಅಪಾಯ ಸಂಭವಿಸದಂತೆ ಭಾರಿ ನಷ್ಟವನ್ನ ಮಿತಿಗೊಳಿಸಲು ನಿಯಂತ್ರಿತ ಮರು ಪ್ರವೇಶಕ್ಕೆ ಒಳಗಾಗುವಂತೆ ಮಾಡಲಾಗುತ್ತದೆ.