ಮುಂಬೈ (ಮಹಾರಾಷ್ಟ್ರ): ಯುನೈಟೆಡ್ ಕಿಂಗ್ಡಮ್(ಯುಕೆ)ನಲ್ಲಿ ಹೊಸ ರೂಪದ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆ, ಅಲ್ಲಿಂದ ಮಂಗಳವಾರ ಮುಂಬೈಗೆ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಕಳುಹಿಸಲಾಯಿತು.
ಪ್ರಯಾಣಿಕರನ್ನು ಸ್ವೀಕರಿಸಲು ಬಂದ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ರು. ಸರ್ಕಾರ ನಮಗೆ ಮೊದಲೇ ಮಾಹಿತಿ ನೀಡಬೇಕಿತ್ತು. ಅಧಿಕಾರಿಗಳು ಅನುಮತಿ ನೀಡಿದ ನಂತರ ತಾನೇ ಪ್ರಯಾಣಿಕರು ವಿಮಾನ ಹತ್ತಿದ್ದು? ಎಂದು ಪ್ರಶ್ನಿಸಿದರು.
ಮುಂಜಾನೆ 2: 30ರ ನಂತರ ಯುಕೆಯಿಂದ ಯಾವುದೇ ವಿಮಾನಗಳು ಬರುವುದಿಲ್ಲ. ಈಗಾಗಲೇ ಬಂದಿರುವವರು ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗುತ್ತಾರೆ. ರೋಗಲಕ್ಷಣವಿಲ್ಲದ ಪ್ರಯಾಣಿಕರು ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಆಗಬೇಕು ಮತ್ತು ಸೋಂಕಿರುವ ಪ್ರಯಾಣಿಕರು ಜಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಹೇಳಿದ್ದಾರೆ.
ಓದಿ:ಸೇನೆಗೆ ಸೇರಲಿರುವ ದಿ. ಲೆಫ್ಟಿನೆಂಟ್ ಧರ್ಮೇಂದ್ರ ಸಿಂಗ್ ಚೌಹಾನ್ ಪತ್ನಿ
ಲಂಡನ್ ಮತ್ತು ಇಂಗ್ಲೆಂಡ್‌ನಲ್ಲಿ ಕೊರೊನಾದ ಹೊಸ ಅಲೆ ಎದ್ದ ಪರಿಣಾಮ ಯುಕೆಯಿಂದ ಭಾರತಕ್ಕೆ ವಿಮಾನ ಸೇವೆಯನ್ನು ಡಿಸೆಂಬರ್ 31ರವರೆಗೆ ಸ್ಥಗಿತಗೊಳಿಸಲಾಗಿದೆ. ಡಿಸೆಂಬರ್ 20 ರಂದು, ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಯುಕೆಯಲ್ಲಿ ಕೋವಿಡ್-19ನ ಹೊಸ ರೂಪಾಂತರ ಕಂಡು ಬಂದಿದೆ ಎಂದು ಸಾರ್ವಜನಿಕರಿಗೆ ತಿಳಿಸಿದ್ದರು.