ಕರ್ನಾಟಕ

karnataka

ETV Bharat / bharat

ಬಸ್​ಗಳಲ್ಲಿ ರಾಮಧುನ್, ಭಜನೆಗಳನ್ನು ಆಲಿಸುತ್ತಾ ಅಯೋಧ್ಯೆಗೆ ಬರುತ್ತಿರುವ ರಾಮ ಭಕ್ತರು - ಉತ್ತರ ಪ್ರದೇಶದ ಸರ್ಕಾರ

ಉತ್ತರ ಪ್ರದೇಶದ ಸರ್ಕಾರ ಅಯೋಧ್ಯೆಗೆ ತೆರಳುವ ಸಾರಿಗೆ ಬಸ್​ಗಳಲ್ಲಿ ರಾಮಧುನ್ ಮತ್ತು ಕೀರ್ತನೆಗಳನ್ನು ಹಾಕಲು ಆದೇಶಿದೆ.

Etv Bharatpassengers-are-traveling-from-agra-to-ayodhya-by-listening-to-ramdhun-and-bhajan-in-roadways-bus
ಬಸ್​ಗಳಲ್ಲಿ ರಾಮಧುನ್, ಭಜನೆಗಳನ್ನು ಆಲಿಸುತ್ತಾ ಅಯೋಧ್ಯೆಗೆ ಬರುತ್ತಿರುವ ರಾಮ ಭಕ್ತರು

By ETV Bharat Karnataka Team

Published : Jan 15, 2024, 7:27 PM IST

ಆಗ್ರಾ(ಉತ್ತರ ಪ್ರದೇಶ): ಅಯೋಧ್ಯೆಯ ರಾಮಮಂದಿರದಲ್ಲಿ ಜ. 22 ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಮತ್ತೊಂದೆಡೆ, ನೂರಾರು ಭಕ್ತರು ಸಾರಿಗೆ ಬಸ್​ಗಳಲ್ಲಿ ರಾಮಧುನ್ ಮತ್ತು ಭಜನೆಗಳನ್ನು ಕೇಳುತ್ತಾ ಆಗ್ರಾದಿಂದ ಅಯೋಧ್ಯೆಗೆ ಬರುತ್ತಿದ್ದಾರೆ. ಹೌದು, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಅವರ ಸೂಚನೆಯ ಮೇರೆಗೆ ವಿವಿಧ ಸ್ಥಳಗಳಿಂದ ಅಯೋಧ್ಯೆಗೆ ತೆರಳುವ ಸಾರಿಗೆ ಬಸ್​ಗಳಲ್ಲಿ ಮ್ಯೂಸಿಕ್​ ಸಿಸ್ಟಮ್​ಗಳನ್ನು ಅಳವಡಿಸಲಾಗಿದೆ. ಇದರಿಂದ ರಾಮ ಭಕ್ತರ ಪ್ರಯಾಣವು ಸ್ಮರಣೀಯ ಮತ್ತು ಆಹ್ಲಾದಕರವಾಗುತ್ತಿದೆ.

ಉತ್ತರ ಪ್ರದೇಶದ ಸರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳಿಂದ ಅಯೋಧ್ಯೆಗೆ ತೆರಳುವ ಸಾರಿಗೆ ಬಸ್​ಗಳಲ್ಲಿ ರಾಮಧುನ್ ಮತ್ತು ಕೀರ್ತನೆಗಳನ್ನು ಹಾಕಲು ಆದೇಶ ನೀಡಿದೆ. ಪ್ರತಿ ಬಸ್ ನಲ್ಲಿ ಮ್ಯೂಸಿಕ್ ಸಿಸ್ಟಮ್ ಅಳವಡಿಸಲು ಒಂದು ಸಾವಿರ ರೂಪಾಯಿ ಖರ್ಚು ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಅಯೋಧ್ಯೆಗೆ ತೆರಳುವ 933 ಸಾರಿಗೆ ಬಸ್ ಗಳಲ್ಲಿ ಮ್ಯೂಸಿಕ್ ಸಿಸ್ಟಮ್ ಅಳವಡಿಸಲಾಗಿದೆ. ಸರ್ಕಾರದ ಆದೇಶದ ಮೇರೆಗೆ ಆಗ್ರಾದಿಂದ ಅಯೋಧ್ಯೆಗೆ ತೆರಳುವ ಬಸ್​ಗಳಲ್ಲಿ ಮ್ಯೂಸಿಕ್ ಸಿಸ್ಟಮ್​ಗಳನ್ನು ಅಳವಡಿಸಲಾಗಿದೆ. ಇದರಿಂದ ಪ್ರಯಾಣದ ಸಮಯದಲ್ಲಿ ರಾಮಧುನ್​ ಜೊತೆಗೆ ಭಜನೆಗಳನ್ನು ಹಾಕಲಾಗುತ್ತಿದೆ ಎಂದು ಬಸ್ ಚಾಲಕ ವಿಕ್ರಮ್ ಸಿಂಗ್ ಹೇಳಿದರು.

ಈಟಿವಿ ಭಾರತ್​ ಜೊತೆಗೆ ಫತೇಹಾಬಾದ್ ನಿವಾಸಿ ಅರುಣ್ ಮಾತನಾಡಿ, ನಾನು ಆಗ್ರಾದಿಂದ ಅಯೋಧ್ಯೆಗೆ ಸಾರಿಗೆ ಬಸ್‌ನಲ್ಲಿ ಹೋಗುತ್ತಿದ್ದೇನೆ. ಬಸ್​ನಲ್ಲಿ ಭಗವಾನ್ ಶ್ರೀರಾಮನ ಹಾಡುಗಳು ಮತ್ತು ಭಜನೆಗಳನ್ನು ಹಾಕಲಾಗುತ್ತಿದೆ. ಇದರಿಂದಾಗಿ ಆಗ್ರಾದಿಂದ ಅಯೋಧ್ಯೆಗೆ ಪ್ರಯಾಣ ಭಕ್ತಿಮಯವಾಗಿದೆ ಎಂದರು. ಇನ್ನು ಸಿಎಂ ಯೋಗಿ ಆದಿತ್ಯನಾಥ್​ ಅವರ ಈ ನಿರ್ಧಾರಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಕ್ನೋ ಪ್ರಧಾನ ಕಚೇರಿಯಿಂದ ಬಂದ ಸೂಚನೆಗಳ ಮೇರೆಗೆ ಆಗ್ರಾದಿಂದ ಅಯೋಧ್ಯೆಗೆ ತೆರಳುವ ಬಸ್‌ನಲ್ಲಿ ಮ್ಯೂಸಿಕ್​ ಸಿಸ್ಟಮ್ ಅಳವಡಿಸಲಾಗಿದೆ ಎಂದು ಎಆರ್‌ಎಂ ಆರ್‌ಎಸ್ ಚೌಧರಿ ತಿಳಿಸಿದರು.

ಜ.23 ರಿಂದ ರಾಮಮಂದಿರ ಸಾರ್ವಜನಿಕರ ದರ್ಶನಕ್ಕೆ ಮುಕ್ತ:ಮತ್ತೊಂದೆಡೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾತನಾಡಿ, ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜ.22 ರಂದು ಮಧ್ಯಾಹ್ನ 1 ಗಂಟೆಯೊಳಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಪ್ರಾಣ ಪ್ರತಿಷ್ಠಾಪನೆ ಬಳಿಕ ಪ್ರಧಾನಮಂತ್ರಿ ಮತ್ತು ಇತರ ಗಣ್ಯರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಸಂಪ್ರದಾಯದಂತೆ 1000 ಬುಟ್ಟಿಗಳಲ್ಲಿ ಉಡುಗೊರೆಗಳು ನೇಪಾಳದ ಜನಕ್‌ಪುರ ಮತ್ತು ಮಿಥಿಲಾ ಪ್ರದೇಶಗಳಿಂದ ಇಲ್ಲಿಗೆ ಬಂದಿವೆ. ಜ.20 ಮತ್ತು 21 ರಂದು ರಾಮಮಂದಿರ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ.ಜನವರಿ 23 ರಿಂದ ರಾಮಮಂದಿರ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಲಿದೆ ಎಂದರು.

ಇದನ್ನೂ ಓದಿ:ಭವ್ಯ ರಾಮ ಮಂದಿರದಲ್ಲಿ ಕರುನಾಡಿನ ರಾಮ; ಮೈಸೂರಿನ ಅರುಣ್​ ಯೋಗಿರಾಜ್​ ಕೆತ್ತನೆಯ ಮೂರ್ತಿ ಆಯ್ಕೆ

ABOUT THE AUTHOR

...view details