ನವದೆಹಲಿ: ದುಬೈಯಿಂದ ಜೈಪುರಕ್ಕೆ ಬರುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನ ಹೈಜಾಕ್ (ಅಪಹರಣ) ಆಗಿದೆ ಎಂದು ಟ್ವೀಟ್ ಮಾಡಿದ್ದರು. ಸುದ್ದಿ ತಿಳಿದ ತಕ್ಷಣ ಅಧಿಕಾರಿಗಳು ಮತ್ತು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಆದರೆ ಅಪಹರಣ ಸುದ್ದಿ ಸುಳ್ಳು ಎಂದು ತಿಳಿದುಬಂದಿದ್ದು, ಟ್ವೀಟ್ ಮಾಡಿದ್ದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, "ರಾಜಸ್ಥಾನದ ನಾಗೌರ್ ನಿವಾಸಿ ಮೋತಿ ಸಿಂಗ್ ರಾಥೋಡ್(29) ಎಂಬವರು ದುಬೈ-ಜೈಪುರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಹವಾಮಾನ ವೈಪರೀತ್ಯದಿಂದಾಗಿ ವಿಮಾನವು ಇಂದಿರಾಗಾಂಧಿ ಏರ್ಪೋರ್ಟ್ಗೆ ಬೆಳಗ್ಗೆ 9.45ಕ್ಕೆ ಲ್ಯಾಂಡ್ ಆಗಿತ್ತು. ಈ ಮಧ್ಯೆ ರಾಥೋಡ್ ವಿಮಾನ ಹೈಜಾಕ್ ಆಗಿದೆ ಎಂದು ಟ್ವೀಟ್ ಮಾಡಿದ್ದರು. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ತಪಾಸಣೆ ನಡೆಸಿದಾಗ ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಬಳಿಕ ವಿಮಾನವನ್ನು ಅಗತ್ಯ ತಪಾಸಣೆ ನಡೆಸಿ, ಆರೋಪಿಯನ್ನು ಬಂಧಿಸಲಾಯಿತು. ನಂತರ ಮಧ್ಯಾಹ್ನ 1.40 ಕ್ಕೆ ವಿಮಾನ ಟೇಕ್ಆಫ್ ಮಾಡಲು ಅನುಮತಿ ನೀಡಲಾಯಿತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಪುಸ್ತಕದ ಪುಟಗಳ ಮಧ್ಯೆ 90,000 ಅಮೆರಿಕನ್ ಡಾಲರ್!: ಮುಂಬೈ ಏರ್ಪೋರ್ಟ್‌ನಲ್ಲಿ ಇಬ್ಬರು ಸೆರೆ
ಪ್ರಯಾಣಿಕರನ್ನು ಬಿಟ್ಟು ಹಾರಿದ ವಿಮಾನ:ವಿಮಾನದಲ್ಲಿ ಪ್ರಯಾಣಿಸಬೇಕಿದ್ದ 35 ಪ್ರಯಾಣಿಕರನ್ನು ಅಮೃತಸರ ವಿಮಾನ ನಿಲ್ದಾಣದಲ್ಲಿ ಬಿಟ್ಟು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ವಿಮಾನವು ಸಿಂಗಾಪುರಕ್ಕೆ ಹಾರಿದ್ದ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಈ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ತನಿಖೆಗೆ ಆದೇಶಿಸಿತ್ತು. ಸಮಯಕ್ಕೂ ಮುಂಚೆ ತಮ್ಮನ್ನು ಬಿಟ್ಟು ವಿಮಾನ ಹಾರಿಹೋಗಿದ್ದರಿಂದ ಕೋಪಗೊಂಡ ಪ್ರಯಾಣಿಕರು ಏರ್ಪೋರ್ಟ್‌ನಲ್ಲಿ ಗಲಾಟೆ ಎಬ್ಬಿಸಿದ್ದರು. ನಂತರ ಘಟನೆಯನ್ನು ಖಂಡಿಸಿ ನಿಲ್ದಾಣದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಮುಂಬೈ ಏರ್ಪೋರ್ಟ್‌ನಲ್ಲಿ ಇಬ್ಬರು ಅರೆಸ್ಟ್:ಅಕ್ರಮವಾಗಿ ಹಣ, ಚಿನ್ನ ಸಾಗಿಸುತ್ತಿದ್ದ ಇಬ್ಬರು ವಿದೇಶಿಗರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಸಿಬ್ಬಂದಿ ಮೊನ್ನೆಯಷ್ಟೇ ಬಂಧಿಸಿದ್ದರು. ಪ್ರಯಾಣಿಕರು ನಿಲ್ದಾಣದಲ್ಲಿ ಬಂದಿಳಿದಾಗ ಅನುಮಾನದ ಮೇರೆಗೆ ತಪಾಸಣೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಪುಸ್ತಕದ ಪುಟಗಳ ಮಧ್ಯೆ 90,000 ಅಮೆರಿಕನ್ ಡಾಲರ್ ಇಟ್ಟು ಅಕ್ರಮವಾಗಿ ಸಾಗಿಸುತ್ತಿರುವುದು ಕಂಡುಬಂದಿತ್ತು. ಇದರ ಜೊತೆಗೆ, 2.5 ಕೆ.ಜಿ ಚಿನ್ನವನ್ನೂ ಆರೋಪಿಗಳಿಂದ ವಶಕ್ಕೆ ಪಡೆಯಲಾಗಿತ್ತು.
ಹಾರಾಟದಲ್ಲಿದ್ದಾಗಲೇ ಇಂಧನ ಕೊರತೆ, ಮುಂದೇನಾಯ್ತು?:ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಆಕಾಶದಲ್ಲಿ ಹಾರಾಟ ಮಾಡುತ್ತಿರುವಾಗಲೇ ಇಂಧನ ಖಾಲಿಯಾಗುವ ಹಂತಕ್ಕೆ ತಲುಪಿದ್ದ ಘಟನೆ ಜನವರಿ 19ರಂದು ವರದಿಯಾಗಿತ್ತು. ಇಂಧನ ಖಾಲಿಯಾಗುತ್ತಿರುವುದು ಮನಗಂಡ ತಕ್ಷಣವೇ ಎಚ್ಚೆತ್ತ ಪೈಲಟ್ ವಿಮಾನವನ್ನು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದರು. ಹೀಗಾಗಿ ವಿಮಾನದಲ್ಲಿದ್ದ 277 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು.
ಇದನ್ನೂ ಓದಿ:ವಿಮಾನ ಪ್ರಯಾಣಿಕರಿಗೆ ಸಿಹಿಸುದ್ದಿ! ಟಿಕೆಟ್ ಡೌನ್ಗ್ರೇಡ್ ಮಾಡಿದ್ರೆ ಶೇ 75 ರಷ್ಟು ಹಣ ವಾಪಸ್