ನವದೆಹಲಿ: ವಿಮಾನ ನಿರ್ಗಮನ ವಿಳಂಬವಾಗಲಿದೆ ಎಂದು ಅನೌನ್ಸ್ ಮಾಡುತ್ತಿದ್ದ ಪೈಲಟ್ ಮೇಲೆ ಪ್ರಯಾಣಿಕ ಹಲ್ಲೆ ನಡೆಸಿದ ಘಟನೆ ಇಂಡಿಯೋ ವಿಮಾನದಲ್ಲಿ ನಡೆದಿದೆ. ಪೈಲಟ್ ಮೇಲೆ ಹಲ್ಲೆಗೈದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಭಾನುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ದೆಹಲಿ-ಗೋವಾ ಇಂಡಿಯೋ ವಿಮಾನದಲ್ಲಿ (6E-2175) ಪೈಲಟ್ ಅನುಪ್ ಕುಮಾರ್ ಹಲ್ಲೆಗೊಳಗಾದವರು. ಭಾನುವಾರ ಮಧ್ಯಾಹ್ನ 1 ಗಂಟೆಗೆ ವಿಮಾನ ಸಂಚಾರದಲ್ಲಿ ವಿಳಂಬ ಆಗಲಿದೆ ಎಂದು ಘೋಷಣೆ ಮಾಡುತ್ತಿದ್ದಂತೆ, ಕುಪಿತಗೊಂಡ ಪ್ರಯಾಣಿಕ ಹಿಂಬದಿ ಸೀಟಿನಿಂದ ಓಡಿಬಂದು ಪೈಲಟ್ಗೆ ಥಳಿಸಿರುವುದು ವಿಡಿಯೋದಲ್ಲಿದೆ. ವಿಮಾನ ಸಿಬ್ಬಂದಿ ಪ್ರಯಾಣಿಕನನ್ನು ಸಮಾಧಾನಪಡಿಸಲು ಯತ್ನಿಸುತ್ತಿರುವುದು ಮತ್ತು ಇನ್ನುಳಿದ ಪ್ರಯಾಣಿಕರಿಗೆ ಬೆಲ್ಟ್ ಹಾಕಿಕೊಳ್ಳುವಂತೆ ಮನವಿ ಮಾಡಿರುವುದು ವಿಡಿಯೋದಲ್ಲಿದೆ.
ಘಟನೆಯ ಬಳಿಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಮಾನಯಾನ ಭದ್ರತಾ ಸಂಸ್ಥೆಯ ಗಮನಕ್ಕೆ ಬಂದಿದೆ. ಆ ಬಳಿಕ ಈ ಕುರಿತು ತನಿಖೆ ಕೈಗೊಳ್ಳಲಾಗಿದೆ. ಇಂಡಿಗೋ ಕೂಡ ಪ್ರಯಾಣಿಕನ ವಿರುದ್ಧ ದೂರು ದಾಖಲಿಸಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂಚಾರ ವ್ಯತ್ಯಯ ಬಗ್ಗೆ ವಿಮಾನದಲ್ಲಿ ಪೈಲಟ್ ಹೇಳುತ್ತಿದ್ದಂತೆ ಪ್ರಯಾಣಿಕ ಓಡಿಬಂದು ಹೊಡೆದಿದ್ದಾನೆ ಎಂದು ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾನುವಾರ ದಟ್ಟ ಮಂಜು ಆವರಿಸಿದ್ದರಿಂದ ದೆಹಲಿ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಕೆಲ ಗಂಟೆಗಳ ಕಾಲ ಹಲವು ವಿಮಾನ ಸಂಚಾರ ವಿಳಂಬವಾಗಿ ಗೊಂದಲ ಸೃಷ್ಟಿಯಾಗಿತ್ತು.
ಇನ್ನು ಹವಾಮನ ವೈಪರಿತ್ಯದಿಂದಾಗಿ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ಪ್ರಯಾಣಿಸುವ ಮುನ್ನ ಸಂಬಂಧಿತ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯನ್ನು ಸಂಪರ್ಕಿಸಬೇಕೆಂದು ದೆಹಲಿ ಏರ್ಪೋರ್ಟ್ ತಿಳಿಸಿದೆ. ದಟ್ಟ ಮಂಜಿನಿಂದಾಗಿ ವಿಮಾನ ಸಂಚಾರವಷ್ಟೇ ಅಲ್ಲ ರೈಲು ಹಾಗೂ ರಸ್ತೆ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ BS-III ಪೆಟ್ರೋಲ್, BS-IV ಡೀಸೆಲ್ ವಾಹನ ಸಂಚಾರ ಬಂದ್
ದಟ್ಟ ಮಂಜು ಆವರಿಸಿದ್ದರಿಂದ ಅಪಘಾತ:ಲಖನೌದಲ್ಲಿ ದಟ್ಟ ಮಂಜು ಆವರಿಸಿದ ಪರಿಣಾಮ ಸರಿಯಾಗಿ ರಸ್ತೆ ಕಾಣದೇ ಟ್ರಕ್ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ ಐವರು ಗಾಯಗೊಂಡ ಘಟನೆ ನಡೆದಿದೆ. ಬಸ್ ಚಾಲಕ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.