ಕರ್ನಾಟಕ

karnataka

ETV Bharat / bharat

ಏರ್‌ ಇಂಡಿಯಾ ವಿಮಾನ ಸಿಬ್ಬಂದಿ ಮೇಲೆ ಹಲ್ಲೆ, ಅಸಭ್ಯ ವರ್ತನೆ: ಪ್ರಯಾಣಿಕ ವಶಕ್ಕೆ

ವಿಮಾನ ಪ್ರಯಾಣದ ವೇಳೆ ಆಗಿಂದಾಗ್ಗೆ ಪ್ರಯಾಣಿಕರು ಈ ರೀತಿ ಅಸಭ್ಯ ವರ್ತನೆ ತೋರುವ ಘಟನೆಗಳು ನಡೆಯುತ್ತಿವೆ.

plane travel
ವಿಮಾನಯಾನ

By

Published : May 31, 2023, 11:44 AM IST

ನವದೆಹಲಿ: ಗೋವಾದಿಂದ ದೆಹಲಿಗೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸೋಮವಾರ ಪ್ರಯಾಣಿಕನೊಬ್ಬ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಆತನನ್ನು ದೆಹಲಿಯ ಭದ್ರತಾ ಪೊಲೀಸರಿಗೆ ಒಪ್ಪಿಸಲಾಗಿದೆ.

ವಿವರ:ಆರೋಪಿ ಪ್ರಯಾಣಿಕ ವಿಮಾನ ಸಿಬ್ಬಂದಿ ಮೇಲೆ ದೈಹಿಕ ಹಲ್ಲೆ ನಡೆಸಿದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗಲೂ ಅಕ್ರಮಣಕಾರಿ, ಅಸಭ್ಯ ವರ್ತನೆ ತೋರಿದರು. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿ ಸುಪರ್ದಿಗೆ ಒಪ್ಪಿಸಲಾಯಿತು. ಈ ಕುರಿತು ದೂರು ಸಲ್ಲಿಸಲಾಗಿದೆ. ಘಟನೆ ತನಿಖೆಯಲ್ಲಿದೆ ಎಂದು ಏರ್ ಇಂಡಿಯಾ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.

ನಮ್ಮ ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆ ನಮಗೆ ಅತ್ಯಂತ ಮಹತ್ವದ್ದು. ಪ್ರಯಾಣಿಕರ ಅಸಭ್ಯ ವರ್ತನೆಯನ್ನು ಸಹಿಸಲು ಆಗುವುದಿಲ್ಲ. ಘಟನೆಯನ್ನು ಬಲವಾಗಿ ಖಂಡಿಸುತ್ತೇವೆ. ತೊಂದರೆ ಅನುಭವಿಸಿದ ಸಂತ್ರಸ್ತ ಸಿಬ್ಬಂದಿಗೆ ಎಲ್ಲ ರೀತಿಯ ಬೆಂಬಲವನ್ನು ಸಂಸ್ಥೆ ನೀಡಲಿದೆ ಎಂದರು.

ಏಪ್ರಿಲ್ 10 ರಂದು ದೆಹಲಿ- ಲಂಡನ್ ನಡುವೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಇಬ್ಬರು ಮಹಿಳಾ ಕ್ಯಾಬಿನ್ ಸಿಬ್ಬಂದಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದ ಪ್ರಯಾಣಿಕನ ವಿರುದ್ಧ ಎರಡು ವರ್ಷ ವಿಮಾನ ಪ್ರಯಾಣ ನಿಷೇಧ ವಿಧಿಸಲಾಗಿದೆ.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ನಿಯಮಗಳ ಪ್ರಕಾರ, ಅಶಿಸ್ತಿನ ಪ್ರಯಾಣಿಕರ ವರ್ತನೆಯನ್ನು ಮೂರು ಹಂತಗಳಾಗಿ ವರ್ಗೀಕರಿಸಬಹುದು. ದೈಹಿಕ ಸನ್ನೆಗಳು, ಮೌಖಿಕ ಕಿರುಕುಳ ಮತ್ತು ಮದ್ಯಪಾನ. ಇಂಥ ಕಾನೂನುಬಾಹಿರ ನಡವಳಿಕೆಗಳನ್ನು ಹಂತ 1 ಎಂದು ವರ್ಗೀಕರಿಸಲಾಗಿದೆ. ಆದರೆ ತಳ್ಳುವುದು, ಒದೆಯುವುದು ಅಥವಾ ಲೈಂಗಿಕ ಕಿರುಕುಳದಂತಹ ದೈಹಿಕವಾಗಿ ನಿಂದನೀಯ ನಡವಳಿಕೆಯನ್ನು ಹಂತ 2 ಎಂದು ವರ್ಗೀಕರಿಸಲಾಗಿದೆ. ವಿಮಾನ ಕಾರ್ಯಾಚರಣಾ ವ್ಯವಸ್ಥೆಗಳಿಗೆ ಹಾನಿ, ದೈಹಿಕ ಹಿಂಸೆಯನ್ನು ಹಂತ 3 ಎಂದು ಪರಿಗಣಿಸಲಾಗುತ್ತದೆ.

ಮಹಿಳಾ ಸಿಬ್ಬಂದಿ ಸ್ಪರ್ಶಿಸಿ ದೌರ್ಜನ್ಯ:ಉದ್ದೇಶಪೂರ್ವಕವಾಗಿ ಪ್ರಯಾಣಿಕರೊಬ್ಬರು ತನ್ನನ್ನು ಸ್ಪರ್ಶಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಇಂಡಿಗೊ ಏರ್​ಲೈನ್ಸ್​ ಮಹಿಳಾ ಸಿಬ್ಬಂದಿಯೊಬ್ಬರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೇರಳ ಮೂಲದ 40 ವರ್ಷದ ಸಿಜಿನ್ ಎಂಬ ಪ್ರಯಾಣಿಕನ ವಿರುದ್ಧ ದೂರು ದಾಖಲಾಗಿದೆ. ಇಂಡಿಗೊ ಏರ್​ಲೈನ್ಸ್​ನ ಮಹಿಳಾ ಸಿಬ್ಬಂದಿ ಮೇಲೆ ಪ್ರಯಾಣಿಕ ಅಸಭ್ಯವಾಗಿ ವರ್ತನೆ ತೋರಿರುವ ಈ ಘಟನೆ ಮೇ 22 ರಂದು ಬೆಳಗಿನ ಸಮಯದಲ್ಲಿ ನಡೆದಿತ್ತು. ಏರ್ ಏಷ್ಯಾ ವಿಮಾನ ಕೊಚ್ಚಿನ್​​ನಿಂದ ಬೆಂಗಳೂರು ಮಾರ್ಗದ ಮೂಲಕ ಭೋಪಾಲ್ ಕಡೆಗೆ ಹೊರಟಿತ್ತು.

ಮಹಿಳಾ ಸಿಬ್ಬಂದಿ ಸೀಟ್ ಬಳಿ ನಿಂತಿದ್ದಾಗ ಪ್ರಯಾಣಿಕ ಸಿಜಿನ್ ಸುಖಾಸುಮ್ಮನೆ ಆ ಸಿಬ್ಬಂದಿಯ ಹಿಂಬದಿ ದೇಹ ಸ್ಪರ್ಶಿಸಿದ್ದಾರಂತೆ. ಯಾಕೆ ಸ್ಪರ್ಶಿಸುತ್ತಿದ್ದೀರಿ ಎಂದು ಸಿಬ್ಬಂದಿ ಪ್ರಶ್ನಿಸಿದಾಗ, ಆ ಪ್ರಯಾಣಿಕ ಯಾವುದೇ ಉತ್ತರ ನೀಡದೆ ಸುಮ್ಮನಾಗಿದ್ದಾನೆ. ಆರೋಪಿ ವಿರುದ್ಧ ಪೊಲೀಸ್​ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಇದನ್ನೂಓದಿ:ಮದ್ಯಪಾನ ಮಾಡಿ ಚಲಿಸುತ್ತಿದ್ದ ಕಾರಿನ ಮೇಲೆ ಪುಷ್​ಅಪ್​: ನಶೆ ಇಳಿಸಿದ ಪೊಲೀಸರು- ವಿಡಿಯೋ

ABOUT THE AUTHOR

...view details