ಹೈದರಾಬಾದ್:ಈ ವರ್ಷದ ಮೊದಲ ಚಂದ್ರಗ್ರಹಣ ಇಂದು ಸಂಭವಿಸಲಿದ್ದು, ಮಧ್ಯಾಹ್ನ ಆರಂಭಗೊಂಡು, ಸಂಜೆಯವರೆಗೆ ಇರಲಿದೆ ಎಂದು ತಿಳಿದು ಬಂದಿದೆ.
ಇಂದು ವರ್ಷದ ಮೊದಲ ಚಂದ್ರಗ್ರಹಣ ಪ್ರಮುಖವಾಗಿ ಭಾರತದ ಈಶಾನ್ಯ ಭಾಗ, ಪಶ್ಚಿಮ ಬಂಗಾಳದ ಕೆಲ ಭಾಗ, ಒಡಿಶಾ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಈ ಚಂದ್ರಗ್ರಹಣ ಭಾಗಶಃ ಗೋಚರವಾಗಲಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆ ಮಧ್ಯೆ ಈ ಗ್ರಹಣ ನಡೆಯಲಿದೆ ಎಂದು ತಿಳಿದು ಬಂದಿದೆ.
ಪ್ರಮುಖವಾಗಿ ದಕ್ಷಿಣ ಅಮೆರಿಕ, ಉತ್ತರ ಅಮೆರಿಕ, ಏಷ್ಯಾ, ಆಸ್ಟ್ರೇಲಿಯಾ, ಅಂಟಾರ್ಟಿಕಾ, ಪೆಸಿಫಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರದಲ್ಲಿ ಈ ಚಂದ್ರಗ್ರಹಣ ಸಂಪೂರ್ಣವಾಗಿ ಗೋಚರವಾಗಲಿದೆ. ಚಂದ್ರ ಗ್ರಹಣದಿಂದ ಯಾರಿಗೂ ಕೂಡ ಅಪಾಯ ಇಲ್ಲ ಎಂದು ತಿಳಿದು ಬಂದಿದೆ.
ಇಂದು ವೈಶಾಖ ಹುಣ್ಣಿಮೆಯಾಗಿರುವ ಕಾರಣ ಸೂಪರ್ ಮೂನ್ ಮತ್ತು ಚಂದ್ರಗ್ರಹಣ ಸಂಭವಿಸಲಿದ್ದು, ಭೂಮಿಯ ಸುತ್ತ ದೀರ್ಘ ವೃತ್ತಾಕಾರದಲ್ಲಿ ಚಲಿಸುವ ಕಾರಣ ಭೂಮಿಗೆ ಅತಿ ಸಮೀಪದಲ್ಲಿ ಚಂದ್ರ ಬರುತ್ತಾನೆ. ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದ ಸಂದರ್ಭದಲ್ಲಿ ಕತ್ತಲು ಆವರಿಸುವ ಬದಲಿಗೆ ಚಂದ್ರನ ಬಣ್ಣ ಕೆಂಪು ಬಣ್ಣಕ್ಕೆ ತಿರುಗುತ್ತದೆ.