ನವದೆಹಲಿ:ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಹೊಸ ಸಂಸತ್ ಭವನ ವಿಸ್ತಾದಲ್ಲಿ ಇದೇ ಮೊದಲ ಬಾರಿಗೆ ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20 ರಿಂದ ಆಗಸ್ಟ್ 11 ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಶನಿವಾರ ತಿಳಿಸಿದರು. ಹೊಸ ಸಂಸತ್ತಿನಲ್ಲಿ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ.
ಈ ಬಗ್ಗೆ ಟ್ವೀಟ್ ಮಾತನಾಡಿರುವ ಅವರು, ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20 ರಿಂದ ಆಗಸ್ಟ್ 11 ರವರೆಗೆ 23 ದಿನಗಳ ಕಾಲ ನಡೆಯಲಿದೆ. ಅಧಿವೇಶನದಲ್ಲಿ ಶಾಸಕಾಂಗ ವ್ಯವಹಾರಗಳು ಮತ್ತು ಇತರ ವಿಷಯಗಳ ಬಗ್ಗೆ ಉತ್ಪಾದಕ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಎಲ್ಲ ಪಕ್ಷಗಳಲ್ಲಿ ಅವರು ಮನವಿ ಮಾಡಿದರು.
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ:23 ದಿನಗಳಲ್ಲಿ 17 ಬಾರಿ ಸಂಸತ್ತು ಅಧಿವೇಶನವಾಗಲಿದೆ. 17 ವಿರೋಧ ಪಕ್ಷಗಳ ಸದಸ್ಯರು ಪಾಟ್ನಾದಲ್ಲಿ ಸಭೆ ನಡೆಸಿ 2024ರ ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಲು ನಿರ್ಧರಿಸಿದ ನಂತರ ಇದು ಸಂಸತ್ತಿನ ಮೊದಲ ಅಧಿವೇಶನವಾಗಿದೆ. ಸಂಸತ್ತಿನಲ್ಲಿ ವಿಪಕ್ಷಗಳು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಹೇಗೆ ಹೋರಾಟ ರೂಪಿಸಲಿವೆ ಎಂಬುದು ಕುತೂಹಲ ಮೂಡಿಸಿದೆ.
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ಜಾರಿ ಮಾಡುವ ಬಗ್ಗೆ ಪ್ರಧಾನಿ ಮೋದಿ ಬೆಂಬಲಿಸಿದ ಬಳಿಕದ ಸಂಸತ್ತು ಸೇರಲಿದೆ. ಅಧಿವೇಶನ ಹಳೆ ಸಂಸತ್ ಭವನದಲ್ಲಿ ಆರಂಭಗೊಂಡ ನಂತರ ಹೊಸ ಕಟ್ಟಡಕ್ಕೆ ವರ್ಗವಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಾಷ್ಟ್ರೀಯ ರಾಜಧಾನಿಯಾದ ದೆಹಲಿಗೆ ಸಂಬಂಧಿಸಿದಂತೆ ಸರ್ಕಾರದ ತಿದ್ದುಪಡಿ ಸುಗ್ರೀವಾಜ್ಞೆಗೆ ಬದಲಿಯಾಗಿ ಹೊಸ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ. ಸುಗ್ರೀವಾಜ್ಞೆಯು ಸುಪ್ರೀಂ ಕೋರ್ಟ್‌ನ ಆದೇಶದ ವಿರುದ್ಧವಾಗಿದ್ದು, ದೆಹಲಿ ಮೇಲೆ ಕೇಂದ್ರದ ಹಿಡಿತವನ್ನು ಬಲಪಡಿಸಿದೆ. ದೆಹಲಿ ಸರ್ಕಾರಕ್ಕೆ "ಸೇವೆಗಳ" ವಿಷಯದ ಮೇಲೆ ಹೆಚ್ಚಿನ ಶಾಸಕಾಂಗ ಮತ್ತು ಆಡಳಿತಾತ್ಮಕ ನಿಯಂತ್ರಣವನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿ ಕಾನೂನು ಮಾಡಲು ಹೊರಟಿದೆ.
ಇದೇ ವೇಳೆ ಕೇಂದ್ರ ಸಚಿವ ಸಂಪುಟ ಅನುಮೋದಿಸಿರುವ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಮಸೂದೆ ಸಹ ಸಂಸತ್ತಿನಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಪ್ರಸ್ತಾವಿತ ಪ್ರತಿಷ್ಠಾನವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ದೇಶದ ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸಲು ಹೊಸ ನಿಧಿಸಂಸ್ಥೆಯಾಗಿದೆ.
ಇದನ್ನೂ ಓದಿ:Congress Guarantee: ಗೃಹಜ್ಯೋತಿ ಅರ್ಜಿ ಹಾಕದೇ ಇದ್ದಲ್ಲಿ ಫ್ರೀ ಕರೆಂಟ್ ಇಲ್ಲ: ಕೆ.ಜೆ ಜಾರ್ಜ್ ಸ್ಪಷ್ಟನೆ