ನವದೆಹಲಿ :ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಜಮ್ಮುವಿನಲ್ಲಿರುವ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಪ್ರಧಾನ ಕಚೇರಿಗೆ ಭೇಟಿ ನೀಡಿತ್ತು. ಜಮ್ಮು ಮತ್ತು ಗಡಿ ಹೊರವಲಯ ಮಕ್ವಾಲ್‌ನಲ್ಲಿ ಜಮ್ಮು ಆಡಳಿತ, ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣದ ಅಧ್ಯಯನ ಪ್ರವಾಸದ ಭಾಗವಾಗಿ ಸಮಿತಿ ಭೇಟಿ ನೀಡಿತು.
ಸಂಸತ್ ಸದಸ್ಯ ಆನಂದ್ ಶರ್ಮಾ ನೇತೃತ್ವದ 18 ಜನರ ತಂಡವನ್ನು ಜಮ್ಮುವಿನ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು. ಮೊದಲಿಗೆ ಸಮಿತಿಯು ಬಿಎಸ್‌ಎಫ್ ಗಡಿಯ ಮಕ್ವಾಲ್‌ಗೆ ಭೇಟಿ ನೀಡಿ, ಪರಿಶೀಲಿಸಿತು.
ಸಮಿತಿಯ ಸದಸ್ಯರು, ಬಿಎಸ್‌ಎಫ್ ಅಧಿಕಾರಿಗಳು ಮತ್ತು ಸೈನಿಕರೊಂದಿಗೆ ಸಂವಾದ ನಡೆಸಿದರು. ಎನ್ ಎಸ್ ಜಮ್ವಾಲ್ ಅವರು ಬಿಎಸ್ಎಫ್ ಮತ್ತು ಬಿಎಸ್ಎಫ್ ಕಮಾಂಡೆಂಟ್, ಗಡಿ ಸವಾಲುಗಳು ಮತ್ತು ಅಲ್ಲಿನ ಬಿಎಸ್ಎಫ್ ಪಡೆಗಳು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಸಮಿತಿಯ ಸದಸ್ಯರಿಗೆ ಮಾಹಿತಿ ನೀಡಿದರು.
ಇದೇ ವೇಳೆ ಸದಸ್ಯರು ಗಡಿಯ ಸಮೀಪದ ಸ್ಥಳೀಯ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. ಸಂಸದೀಯ ಸಮಿತಿಯ ಸದಸ್ಯರು ಫ್ರಾಂಟಿಯರ್ ಹೆಡ್ ಕ್ವಾರ್ಟರ್ ಬಿಎಸ್ಎಫ್ ಪಲೌರಾ ಕ್ಯಾಂಪ್ಗೆ ಭೇಟಿ ನೀಡಿ, ಗೌರವ ಸ್ವೀಕರಿಸಿದರು.
ಜಮ್ಮು ಅಂತಾರಾಷ್ಟ್ರೀಯ ಗಡಿ ಭದ್ರತೆ (ಐಬಿ), ಪ್ರಾಬಲ್ಯದ ಬಗ್ಗೆ ಸಂಸದೀಯ ಸಮಿತಿಯ ಸದಸ್ಯರಿಗೆ ವಿವರವಾದ ಮಾಹಿತಿ ನೀಡಿದರು. ಗಡಿಯುದ್ದಕ್ಕೂ ಬಿಎಸ್‌ಎಫ್ ಎದುರಿಸುತ್ತಿರುವ ಬೆದರಿಕೆಗಳು, ಸುರಂಗ, ಕಳ್ಳಸಾಗಣೆ ಮತ್ತು ಪಾಕ್ ಸೈನಿಕರ ಬೆದರಿಕೆ ಸೇರಿ ಹಲವು ಮಾಹಿತಿಗಳನ್ನು ಪಡೆದರು.
ಮಳೆಗಾಲದಲ್ಲಿ ಬಿಎಸ್‌ಎಫ್ ಸಿಬ್ಬಂದಿ ಎದುರಿಸುತ್ತಿರುವ ಸವಾಲುಗಳು, ಮಂಜಿನ ವಾತಾವರಣದ ಸಮಸ್ಯೆಗಳ ಬಗ್ಗೆ ಸಮಿತಿಗೆ ತಿಳಿಸಲಾಯಿತು. ಸದಸ್ಯರು ರಸ್ತೆ ಸಂಪರ್ಕ, ನಿರಂತರ 24 ಗಂಟೆಗಳ ವಿದ್ಯುತ್ ಪೂರೈಕೆ ಮತ್ತು ಶುದ್ಧ ಕುಡಿಯುವ ನೀರು ಸೇರಿ ಮೂಲಸೌಕರ್ಯಗಳನ್ನೂ ಪರಿಶೀಲಿಸಿದರು.
ಗಡಿಯಲ್ಲಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳುವುದು, ಪಾಕಿಸ್ತಾನದ ನುಸುಳುಕೋರರನ್ನು ತಟಸ್ಥಗೊಳಿಸುವುದು, ಸುರಂಗಗಳನ್ನು ಪತ್ತೆ ಮಾಡುವುದು ಮತ್ತು ಪಾಕಿಸ್ತಾನದ ಡ್ರೋನ್ಗಳನ್ನು ಹೊಡೆದುರುಳಿಸುವುದು ಮುಂತಾದ ಬಿಎಸ್‌ಎಫ್‌ನ ಸಾಧನೆಗಳಿಗೆ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿತು.