ನವದೆಹಲಿ:ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಜಾರಿ ಕುರಿತಂತೆ ಮಹತ್ತರ ಬೆಳಗಣಿಗೆಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಯುಸಿಸಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ಇದರ ಬೆನ್ನಲ್ಲೇ ಈ ಕುರಿತ ಚರ್ಚೆಗೆ ಉನ್ನತ ಮಟ್ಟದ ಸಂಸದೀಯ ಸ್ಥಾಯಿ ಸಮಿತಿಯು ಇಂದು (ಸೋಮವಾರ) ಸಭೆ ಕರೆದಿದೆ.
ರಾಜ್ಯಸಭಾ ಸಂಸದ ಸುಶೀಲ್ ಮೋದಿ ನೇತೃತ್ವದಲ್ಲಿ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ ರಾಜ್ಯಸಭಾ ಸಂಸದೀಯ ಸ್ಥಾಯಿ ಸಮಿತಿಯು ಮಧ್ಯಾಹ್ನ 3 ಗಂಟೆಗೆ ಕಾನೂನು ಕುರಿತು ಚರ್ಚಿಸಲಿದೆ. ಸಮಿತಿಯು ಈ ವಿಷಯದ ಬಗ್ಗೆ ಮಧ್ಯಸ್ಥಗಾರರ ಅಭಿಪ್ರಾಯಗಳನ್ನು ಪಡೆಯಲಿದೆ ಎಂದು ಸುಶೀಲ್ ಮೋದಿ ಈ ಹಿಂದೆ ತಿಳಿಸಿದ್ದರು. ಕಾನೂನು ವ್ಯವಹಾರಗಳ ಇಲಾಖೆ, ಶಾಸಕಾಂಗ ಇಲಾಖೆ ಹಾಗೂ ಭಾರತೀಯ ಕಾನೂನು ಆಯೋಗದ ಪ್ರತಿನಿಧಿಗಳನ್ನೂ ಸಭೆಗೆ ಆಹ್ವಾನಿಸಲಾಗಿದೆ.
ಕಾನೂನು ಆಯೋಗದಿಂದ ಅಭಿಪ್ರಾಯ ಸಂಗ್ರಹ:ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತಂತೆ ಕಾನೂನು ಆಯೋಗ ಜನರಿಂದ ಸಲಹೆ, ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದೆ. ಜೂನ್ 14ರಿಂದ ಇದಕ್ಕೆ ಅವಕಾಶ ನೀಡಲಾಗಿದ್ದು, ಅಭಿಪ್ರಾಯ ತಿಳಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಇದಕ್ಕೆ ಜನರಿಂದ ಭರ್ಜರಿ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಕೇವಲ 15 ದಿನದಲ್ಲಿ 8.5 ಲಕ್ಷದಷ್ಟು ಸಲಹೆಗಳು ಕಾನೂನು ಆಯೋಗಕ್ಕೆ ಹರಿದು ಬಂದಿವೆ ಎಂದು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಮಾಹಿತಿ ನೀಡಿದ್ದರು.