ನವದೆಹಲಿ:ಸಂಸತ್ತಿನ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕರೆದಿರುವ ಸರ್ವಪಕ್ಷ ಸಭೆ ನಡೆಯುತ್ತಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಭೆಗೆ ಆಗಮಿಸಿದ್ದಾರೆ.
ಈ ಅಧಿವೇಶನದಲ್ಲಿ ಬಿಜೆಪಿ ಸರ್ಕಾರವು 26 ಹೊಸ ಮಸೂದೆಗಳನ್ನು ಮಂಡಿಸಲಿದ್ದು, ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಆದ್ಯತೆಯ ಮೇಲೆ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೃಷಿ ಕಾಯ್ದೆಗಳನ್ನು ರದ್ದು ಮಾಡಲು ಈ ವಾರದ ಆರಂಭದಲ್ಲಿ ಕೇಂದ್ರ ಸಚಿವ ಸಂಪುಟವು ಒಪ್ಪಿಕೊಂಡಿದೆ. ಕೃಷಿ ಕಾನೂನುಗಳನ್ನು ರದ್ದುಪಡಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಮಂಡಿಸುತ್ತಿರುವ ಬಿಲ್ಗಳಲ್ಲಿ ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಬಿಲ್- 2021 ಅತ್ಯಂತ ಪ್ರಮುಖವಾಗಿದೆ.
ಅಧಿವೇಶನವು ನವೆಂಬರ್ 29ರಂದು ಪ್ರಾರಂಭವಾಗಿ, ಡಿಸೆಂಬರ್ 23ರಂದು ಮುಕ್ತಾಯಗೊಳ್ಳಲಿದೆ. ನವೆಂಬರ್ 29ರಂದು ಎಲ್ಲಾ ಸಂಸದರು ಉಭಯ ಸದನಗಳಲ್ಲಿ ಹಾಜರಿರಬೇಕೆಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ವಿಪ್ ಜಾರಿ ಮಾಡಿವೆ.
ಇದನ್ನೂ ಓದಿ:Aircel-Maxis case : ಮಾಜಿ ಸಚಿವ ಚಿದಂಬರಂ ಹಾಗೂ ಮಗ ಕಾರ್ತಿಗೆ ಸಮನ್ಸ್