ನವದೆಹಲಿ: ಹಣಕ್ಕಾಗಿ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಇಂದು ಉಚ್ಛಾಟನೆ ಮಾಡಲಾಗಿದೆ. ನೈತಿಕ ಸಮಿತಿಯ ವರದಿಯನ್ನು ಸದನ ಅಂಗೀಕರಿಸಿತು.
ಸಂಸತ್ತಿನ ಚಳಿಗಾಲದ ಅಧಿವೇಶನದ ಐದನೇ ದಿನ ಸಮಿತಿಯ ಅಧ್ಯಕ್ಷ ವಿನೋದ್ ಸೋನ್ಕರ್ ವರದಿಯನ್ನು ಸದನದ ಮುಂದಿಟ್ಟರು. ಮಹುವಾ ಮೊಯಿತ್ರಾ ವಿರುದ್ಧ ಲೋಕಸಭೆ ಸ್ಪೀಕರ್‌ಗೆ ಮೂರು ಶಿಫಾರಸುಗಳನ್ನು ಸಮಿತಿ ಮಾಡಿತ್ತು. ''ಲೋಕಸಭೆ ಪೋರ್ಟಲ್‌ನ ಲಾಗಿನ್ ಸವಲತ್ತುಗಳನ್ನು ಅನಧಿಕೃತ ವ್ಯಕ್ತಿಗಳೊಂದಿಗೆ ಹಂಚಿಕೊಂಡಿದ್ದು ಮೊಯಿತ್ರಾ ಅವರ 'ಅನೈತಿಕ ನಡವಳಿಕೆ' ಮತ್ತು 'ಸದನದ ಅವಹೇಳನ'ವಾಗಿದೆ. 'ರಾಷ್ಟ್ರೀಯ ಭದ್ರತೆ' ಮೇಲೆ ಇದರ ಪ್ರಭಾವದ ಕುರಿತು ಸಮಿತಿ ಉಲ್ಲೇಖಿಸಿದೆ. ಮೊಯಿತ್ರಾ ಕಡೆಯಿಂದ ನಡೆದ ಗಂಭೀರ ಸ್ವರೂಪದ ಅಪರಾಧಕ್ಕೆ ಕಠಿಣ ಶಿಕ್ಷೆ ಆಗಬೇಕಿದೆ. ಹೀಗಾಗಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಉಚ್ಚಾಟಿಸಬೇಕು'' ಎಂದು ಸಮಿತಿ ಉಲ್ಲೇಖಿಸಿತ್ತು.
ಸದನದಲ್ಲಿ ಕೋಲಾಹಲ:ಸದನದಲ್ಲಿನೈತಿಕ ಸಮಿತಿ ಶಿಫಾರಸಿನ ಕುರಿತು ಮಹುವಾ ಮೊಯಿತ್ರಾ ಅವರಿಗೆ ಮಾತನಾಡಲು ಸ್ಪೀಕರ್ ಅವಕಾಶ ನೀಡಲಿಲ್ಲ. ಸಮಿತಿ ಸಭೆಯಲ್ಲಿ ಅವರಿಗೆ ಅವಕಾಶ ಸಿಕ್ಕಿತು ಎಂದು ಅವರು ತಿಳಿಸಿದರು. ಇದಕ್ಕೆ ಪ್ರತಿಪಕ್ಷಗಳಿಂದ ಆಕ್ಷೇಪ ವ್ಯಕ್ತವಾಯಿತು. ಇದೇ ವಿಷಯವಾಗಿ ಸಾಕಷ್ಟು ಚರ್ಚೆ ನಡೆಯಿತು.
ಇದರ ನಡುವೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸುವ ಪ್ರಸ್ತಾಪವನ್ನು ಮಂಡಿಸಿದರು. ಈ ಪ್ರಸ್ತಾವನೆಗೆ ಸ್ಪೀಕರ್ ಮತದಾನ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು ಸದನದಿಂದ ಹೊರನಡೆದರು. ಮತ್ತೊಂದೆಡೆ, ಧ್ವನಿ ಮತದ ಮೂಲಕ ಉಚ್ಛಾಟನೆ ಮಾಡಬೇಕೆಂಬ ವರದಿಯನ್ನು ಅಂಗೀಕರಿಸಲಾಯಿತು. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಲಾಪವನ್ನು ಸ್ಪೀಕರ್ ನಾಳೆಗೆ ಮುಂದೂಡಿದರು.
ಅವಕಾಶ ನೀಡಬೇಕಿತ್ತು- ಕಾಂಗ್ರೆಸ್:ಇದಕ್ಕೂ ಮುನ್ನ,''ನೈತಿಕ ಸಮಿತಿಯವರದಿ ಕುರಿತು ಸಂಸದೆ ಮಹುವಾ ಮೊಯಿತ್ರಾ ಅವರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಬೇಕು. ಸಮಿತಿಯ 495 ಪುಟಗಳ ವರದಿಯನ್ನು ಅಧ್ಯಯನ ಮಾಡಲು ಕನಿಷ್ಠ 4 ದಿನಗಳ ಕಾಲಾವಕಾಶ ಕೊಡಬೇಕು'' ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಒತ್ತಾಯಿಸಿದರು.
ಬಿಜೆಪಿ ಸಂಸದ ಹಿನಾ ಗಾವಿತ್ ಮಾತನಾಡಿ, ''ಮಹುವಾ ಮೊಯಿತ್ರಾ ಅವರಿಗೆ ಅಫಿಡವಿಟ್ ಆಧಾರದ ಮೇಲೆ ನೈತಿಕ ಸಮಿತಿ ಪ್ರಶ್ನೆಗಳನ್ನು ಕೇಳಿದೆ. ಅವರಿಗೆ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿಲ್ಲ. 2005ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಇದೇ ರೀತಿ ವರದಿಯನ್ನು ಮಂಡಿಸಲಾಗಿತ್ತು. ಆಗ ಒಂದೇ ದಿನ 10 ಲೋಕಸಭಾ ಸದಸ್ಯರನ್ನು ಹೊರಹಾಕಲಾಗಿತ್ತು'' ಎಂದು ನೆನಪಿಸಿದರು.
ಇದನ್ನೂ ಓದಿ:ಹಣಕ್ಕಾಗಿ ಸಂಸತ್ತಿನಲ್ಲಿ ಪ್ರಶ್ನೆ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆ ಶುರು