ನವದೆಹಲಿ:ನೂತನ ಸಂಸತ್ ಭವನದಲ್ಲಿ ಬುಧವಾರ ಉಂಟಾದ ಭದ್ರತಾ ಲೋಪ ಪ್ರಕರಣ ಸಂಬಂಧ ಮತ್ತಿಬ್ಬರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಮಹೇಶ್ ಮತ್ತು ಕೈಲಾಶ್ ಎಂದು ಗುರುತಿಸಲಾಗಿದೆ. ಈ ಪೈಕಿ ಮಹೇಶ್ ಗುರುವಾರ ರಾತ್ರಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ವರದಿಯಾಗಿದೆ. ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾದ ಲಲಿತ್ ಝಾನನ್ನು ಇಂದು ಪೊಲೀಸರು ಪಟಿಯಾಲ ಹೌಸ್ ಕೋರ್ಟ್ಗೆ ಹಾಜರುಪಡಿಸಿದ್ದು, ಕೋರ್ಟ್ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಲೋಕಸಭೆ ಕಲಾಪದ ವೇಳೆ ವೀಕ್ಷಕರ ಗ್ಯಾಲರಿಯಿಂದ ಮೈಸೂರಿನ ಮನೋರಂಜನ್ ಹಾಗೂ ಉತ್ತರ ಪ್ರದೇಶದ ಸಾಗರ್ ಶರ್ಮಾ ಎಂಬಿಬ್ಬರು ಸಂಸದರ ನಡುವೆ ಜಿಗಿದು ಹಳದಿ ಬಣ್ಣದ ಸ್ಪ್ರೆ ಎರಚಿ ಆತಂಕ ಸೃಷ್ಟಿಸಿದ್ದರು. ಇದೇ ಸಮಯದಲ್ಲಿ ಮಹಾರಾಷ್ಟ್ರದ ಅಮೋಲ್ ಶಿಂಧೆ ಹಾಗೂ ಹರಿಯಾಣದ ನೀಲಂ ದೇವಿ ಸಂಸತ್ತಿನ ಆವರಣದಲ್ಲಿ ಘೋಷಣೆಗಳನ್ನು ಕೂಗಿ ಕೋಲಾಹಲ ಉಂಟುಮಾಡಿದ್ದರು. ಈಗಾಗಲೇ ಈ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಇವರನ್ನೂ ಏಳು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಲಾಗಿದೆ.
ಇದನ್ನೂ ಓದಿ:ಸಂಸತ್ ಭವನದ ಭದ್ರತಾ ಲೋಪ ಪ್ರಕರಣ: 7 ದಿನ ಪೊಲೀಸ್ ಕಸ್ಟಡಿಗೆ ನಾಲ್ವರು ಆರೋಪಿಗಳು
ಮತ್ತೊಂದೆಡೆ, ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾದ ಪಶ್ಚಿಮ ಬಂಗಾಳದ ಕೋಲ್ಕತ್ತಾ ನಿವಾಸಿ, ಬಿಹಾರದ ಮೂಲದ ಲಲಿತ್ ಝಾ ಗುರುವಾರ ರಾತ್ರಿ ತಾನಾಗಿಯೇ ದೆಹಲಿಯ ಕರ್ತವ್ಯ ಪಥ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಝಾ ಜೊತೆಗೆ ಮಹೇಶ್ ಕೂಡ ಬಂದು ಶರಣಾಗಿದ್ದಾನೆ. ಈ ವೇಳೆ, ವಿಶೇಷ ಪೊಲೀಸ್ ಘಟಕವು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಇಬ್ಬರು ಆರೋಪಿಗಳ ವಿಚಾರಣೆ ಬಳಿಕ ಲಲಿತ್ ಝಾನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಮಹೇಶ್‌ನನ್ನು ತಮ್ಮ ವಶದಲ್ಲಿರಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇವರ ವಿಚಾರಣೆಯ ಸಮಯದಲ್ಲೇ ಕೈಲಾಶ್ ಹೆಸರು ಬಹಿರಂಗವಾಗಿದ್ದು, ಇದರಿಂದ ಆತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಪೊಲೀಸರಿಗೆ ಶರಣಾಗುವ ಮುನ್ನ ಲಲಿತ್ ಝಾ ಬಸ್ನಲ್ಲಿ ರಾಜಸ್ಥಾನಕ್ಕೆ ತೆರಳಲು ಪ್ರಯತ್ನಿಸುತ್ತಿದ್ದ. ಅಲ್ಲದೇ, ದೆಹಲಿಗೆ ಮರಳುವ ಮೊದಲು ತನ್ನ ಮೊಬೈಲ್ ಫೋನ್ ನಾಶ ಮಾಡಿರುವ ಶಂಕೆಯೂ ಇದೆ. ಸದ್ಯಕ್ಕೆ ಪೊಲೀಸ್ ವಿಶೇಷ ಘಟಕವು ಭದ್ರತಾ ಲೋಪದ ಘಟನೆ ದೃಶ್ಯಗಳನ್ನು ಮರುಸೃಷ್ಟಿಸಲು ಮುಂದಾಗಿದೆ ಎಂದೂ ಮೂಲಗಳು ಹೇಳಿವೆ.
ಕಲಾಪಕ್ಕೆ ನುಗ್ಗಿದ ಪ್ರಮುಖ ಆರೋಪಿಗಳಾದ ಮನೋರಂಜನ್, ಸಾಗರ್ ಶರ್ಮಾ ಮತ್ತು ಲಲಿತ್ ಝಾ ಸೇರಿ ಐವರ ವಿರುದ್ಧ ವಿವಿಧ ಕಠಿಣ ಸೆಕ್ಷನ್ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಭಯೋತ್ಪಾದನಾ ನಿಗ್ರಹ ಕಾನೂನಾಗಿರುವ ಯುಎಪಿಎಯ ಸೆಕ್ಷನ್ 16 (ಭಯೋತ್ಪಾದನೆ), 18 (ಭಯೋತ್ಪಾದನೆಗೆ ಪಿತೂರಿ) ಮತ್ತು ಐಪಿಸಿ ಸೆಕ್ಷನ್ಗಳಾದ 120-ಬಿ (ಕ್ರಿಮಿನಲ್ ಪಿತೂರಿ), 452 (ಅತಿಕ್ರಮಣ), 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ), 186 (ಸಾರ್ವಜನಿಕ ಸೇವಕರಿಗೆ ಅಡ್ಡಿ) ಮತ್ತು 353 (ಸಾರ್ವಜನಿಕ ಸೇವಕರ ಮೇಲೆ ಹಲ್ಲೆ) ಅಡಿ ಮೊಕದ್ದಮೆಗಳನ್ನು ಹೂಡಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ:ಕೋಲ್ಕತ್ತಾಕ್ಕೂ ಸಂಸತ್ತಿನ ಭದ್ರತಾ ಲೋಪ ಪ್ರಕರಣದ ನಂಟು: ದೆಹಲಿ ಪೊಲೀಸರಿಗೆ 'ಮಾಸ್ಟರ್ ಮೈಂಡ್' ಲಲಿತ್ ಝಾ ಶರಣಾಗತಿ