ಕರ್ನಾಟಕ

karnataka

ETV Bharat / bharat

ಸಂಸತ್ ಭವನದ ಭದ್ರತಾ ಲೋಪ ಪ್ರಕರಣ: 7 ದಿನ ಪೊಲೀಸ್ ಕಸ್ಟಡಿಗೆ ನಾಲ್ವರು ಆರೋಪಿಗಳು - ಅಮೋಲ್ ಶಿಂಧೆ

Parliament Security Breach: ನೂತನ ಸಂಸತ್ ಭವನದ ಭದ್ರತಾ ಲೋಪ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ.

Parliament security breach: Delhi Police Special Cell gets 7 day remand of four accused persons
ಸಂಸತ್ ಭವನದ ಭದ್ರತಾ ಲೋಪ ಪ್ರಕರಣ: ನಾಲ್ವರು ಆರೋಪಿಗಳು 7 ದಿನ ಪೊಲೀಸ್ ಕಸ್ಟಡಿ

By ETV Bharat Karnataka Team

Published : Dec 14, 2023, 8:23 PM IST

Updated : Dec 14, 2023, 8:37 PM IST

ನವದೆಹಲಿ:ನೂತನ ಸಂಸತ್ ಭವನದ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಆರೋಪಿಗಳನ್ನು ಏಳು ದಿನಗಳ ಕಾಲ ದೆಹಲಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಗುರುವಾರ ಆದೇಶಿಸಿದೆ. ಈ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಜೊತೆಗೆ ಭಯೋತ್ಪಾದನಾ ವಿರೋಧಿ ಕಾನೂನು ಆಗಿರುವ ಯುಎಪಿಎ ಅಡಿ ಆರೋಪ ಹೊರಿಸಲಾಗಿದೆ.

ಬುಧವಾರ ಲೋಕಸಭೆ ಕಲಾಪಕ್ಕೆ ನುಗ್ಗಿದ ಇಬ್ಬರು ಹಾಗೂ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಈ ಆರೋಪಿಗಳಾದ ಮನೋರಂಜನ್.ಡಿ, ಸಾಗರ್ ಶರ್ಮಾ, ಅಮೋಲ್ ಶಿಂಧೆ ಮತ್ತು ನೀಲಂ ದೇವಿ ಅವರನ್ನು ಎನ್‌ಐಎ ಪ್ರಕರಣಗಳ ವಿಶೇಷ ನ್ಯಾಯಾಧೀಶರಾದ ಹರ್ದೀಪ್ ಕೌರ್ ಅವರ ಮುಂದೆ ಪೊಲೀಸರು ಹಾಜರುಪಡಿಸಿದರು. ಈ ವೇಳೆ, ಆರೋಪಿಗಳನ್ನು 15 ದಿನಗಳ ಕಾಲ ತಮ್ಮ ಕಸ್ಟಡಿಗೆ ಒಪ್ಪಿಸಬೇಕೆಂದು ಪೊಲೀಸರು ಮನವಿ ಮಾಡಿದರು. ಆದರೆ, ನ್ಯಾಯಾಲಯವು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತು.

ಇದನ್ನೂ ಓದಿ:ಆರು ಜನರಲ್ಲಿ ಇಬ್ಬರಿಗೆ ಮಾತ್ರ ಸಿಕ್ಕಿತ್ತು 'ಸಂಸತ್​' ಪಾಸ್​; ಸೋಷಿಯಲ್​ ಮೀಡಿಯಾದಲ್ಲೇ ಸಿದ್ಧವಾಗಿತ್ತು ಪ್ಲಾನ್​!

ಒಟ್ಟು ಆರು ಜನರ ಗುಂಪು ಕಲಾಪಕ್ಕೆ ನುಗ್ಗಲು ಯೋಜನೆ ರೂಪಿಸಿತ್ತು. ಆದರೆ, ಆರು ಮಂದಿ ಪೈಕಿ ಮೈಸೂರು ಮೂಲದ ಮನೋರಂಜನ್, ಉತ್ತರಪದೇಶದ ಲಖನೌ ಮೂಲದ ಸಾಗರ್ ಶರ್ಮಾಗೆ ಪಾಸ್ ಸಿಕ್ಕಿತ್ತು. ತಮ್ಮ ಪ್ಲಾನ್​ ಪ್ರಕಾರ, ಒಳನುಗ್ಗಿದ್ದ ಈ ಇಬ್ಬರು ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಲೋಕಸಭೆಯಲ್ಲಿ ಸಂಸದರು ಶೂನ್ಯ ವೇಳೆಯಲ್ಲಿ ಮಾತನಾಡುತ್ತಿದ್ದಾಗಲೇ ಸಾರ್ವಜನಿಕ ಗ್ಯಾಲರಿಯಿಂದ ಸದನದೊಳಗೆ ಜಿಗಿದಿದ್ದರು. ಅಲ್ಲದೇ, ಹಳದಿ ಬಣ್ಣದ ಸ್ಟ್ರೇ ಬಿಡುಗಡೆ ಮಾಡಿ ಆತಂಕ ಸೃಷ್ಟಿಸಿದ್ದರು.

ಇದನ್ನೂ ಓದಿ:ಲೋಕಸಭೆಯಿಂದ 14​ ಸಂಸದರ ಅಮಾನತು; ರಾಜ್ಯಸಭೆಯಿಂದ ಡೆರೆಕ್ ಒಬ್ರಿಯಾನ್ ಸಸ್ಪೆಂಡ್

ಅದೇ ಸಮಯದಲ್ಲಿ ಸಂಸತ್ತಿನ ಆವರಣದ ಹೊರಗೆ ಹರಿಯಾಣ ಮೂಲದ ನೀಲಂ ದೇವಿ ಮತ್ತು ಮಹಾರಾಷ್ಟ್ರದ ಲಾತೂರು ಮೂಲದ ಅಮೋಲ್ ಶಿಂಧೆ ಘೋಷಣೆಗಳನ್ನು ಕೂಗಿ ಸ್ಟ್ರೇ ಮಾಡುತ್ತಾ ಕೋಲಾಹಲ ಉಂಟು ಮಾಡಿದ್ದಾರೆ. ಈ ಘಟನೆಯ ಬೆನ್ನಲ್ಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಈ ಆರೋಪಿಗಳು ಪ್ರಧಾನಿ ನರೇಂದ್ರ ಮೋದಿ ಅವರು ನಾಪತ್ತೆಯಾಗಿದ್ದಾರೆ ಎಂಬಿಸುವ ಕರಪತ್ರಗನ್ನು ಹಿಡಿದು, ಅವರನ್ನು ಪತ್ತೆ ಹಚ್ಚಿದವರಿಗೆ ಸ್ವಿಸ್ ಬ್ಯಾಂಕ್‌ನಿಂದ ನಗದು ಬಹುಮಾನ ನೀಡಲಾಗುವುದು ಎಂದು ಘೋಷಣೆ ಕೂಗಿದ್ದರು. ಜೊತೆಗೆ ರೈತರ ಪ್ರತಿಭಟನೆಯಂತಹ ವಿಷಯಗಳಿಂದ ಅಸಮಾಧಾನಗೊಂಡಿದ್ದ ಇವರು, ಮಣಿಪುರ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆಗಳು ಕುರಿತು ಸರ್ಕಾರಕ್ಕೆ ಸಂದೇಶ ರವಾನಿಸಲು ಈ ಕೃತ್ಯ ಎಸಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಮನೋರಂಜನ್ ಮೈಸೂರಿನ ಮನೆಗೆ ಗುಪ್ತಚರ ಇಲಾಖೆಯ ಅಧಿಕಾರಿಗಳ ಭೇಟಿ: ಮಾಹಿತಿ ಸಂಗ್ರಹ

Last Updated : Dec 14, 2023, 8:37 PM IST

ABOUT THE AUTHOR

...view details