ನವದೆಹಲಿ:ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರಿ ಭದ್ರತಾ ಲೋಪ ಉಂಟಾಗಿದ್ದು, ಲೋಕಸಭೆ ಕಲಾಪ ನಡೆಯುತ್ತಿದ್ದ ಸಮಯದಲ್ಲಿ ಇಬ್ಬರು ಯುವಕರು ಸದನದೊಳಗೆ ನುಗ್ಗಿದ್ದರು. ಇದರಿಂದ ಕಲಾಪಕ್ಕೆ ತೀವ್ರ ಅಡ್ಡಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಬುಧವಾರ ಲೋಕಸಭೆ ಅಧಿವೇಶನ ವೀಕ್ಷಕರ ಗ್ಯಾಲರಿಯಿಂದ ದಿಢೀರ್ ಜಿಗಿದ ಇಬ್ಬರು ಯುವಕರು ಸ್ಮೋಕ್ ಕ್ರ್ಯಾಕರ್ವೊಂದನ್ನು ಸ್ಪ್ರೇ ಮಾಡಿದ್ದರು. ಜೊತೆಗೆ ಘೋಷಣೆಗಳನ್ನು ಕೂಗಿದ್ದರು. ಸದನದಲ್ಲಿದ್ದ ಸಚಿವರು ಹಾಗೂ ಸಂಸದರು ಆತಂಕದಿಂದ ಹೊರ ಬಂದಿದ್ದರು. ಇದೇ ವೇಳೆ ಹೊರಗಿನ ಗೇಟ್ ಬಳಿಯೂ ಯುವತಿಯೊಬ್ಬಳು ಇದೇ ರೀತಿ ಬಣ್ಣವನ್ನು ಸ್ಪ್ರೇ ಮಾಡಿದ್ದಳು. ಸಂಸತ್ ಭವನದ ಮೇಲಿನ ದಾಳಿಯ ವರ್ಷಾಚರಣೆಯಂದೇ ಭದ್ರತಾ ಲೋಪ ಆಗಿತ್ತು.
ಕೆಲ ದಿನಗಳ ಹಿಂದೆಯೇ ಸಂಚು- ಪೊಲೀಸ್ ಮಾಹಿತಿ:ಬುಧವಾರ ನಡೆದ ಸಂಸತ್ತಿನ ಭದ್ರತಾ ಉಲ್ಲಂಘನೆ ಮಾಡಲು ಆರು ಜನರು ಸಂಚು ರೂಪಿಸಿದ್ದರು. ಈ ಪೈಕಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆ ಆರು ಆರೋಪಿಗಳು ನಾಲ್ಕು ವರ್ಷಗಳಿಂದ ಪರಿಚಿತರು. ಕೆಲವು ದಿನಗಳ ಹಿಂದೆ ಸಂಸತ್ತಿಗೆ ನುಗ್ಗಲು ಸಂಚು ರೂಪಿಸಿದ್ದರು. ಆರೋಪಿಗಳು ಸಾಮಾಜಿಕ ಜಾಲಾತಾಣಗಳ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು. ಬುಧವಾರ ಸಂಸತ್ತಿಗೆ ನುಗ್ಗುವ ಮುನ್ನವೇ ತಮ್ಮಲ್ಲೇ ಮಾತುಕತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಭದ್ರತಾ ಉಲ್ಲಂಘನೆ ಮಾಡಿದ ಇಬ್ಬರು ಯುವಕರಾದ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಕಲಾಪಕ್ಕೆ ಹಾರಿ, ಕಲರ್ ಸ್ಮೋಕ್ ಬಾಂಬ್ ಸ್ಪ್ರೇ ಮಾಡಿದ್ದರು. ಅದೇ ಸಮಯದಲ್ಲಿ ಇತರ ಇಬ್ಬರು ಆರೋಪಿಗಳಾದ ಅಮೋಲ್ ಶಿಂಧೆ ಮತ್ತು ನೀಲಂ ದೇವಿ ಸಂಸತ್ತಿನ ಆವರಣದ ಹೊರಗೆ ಘೋಷಣೆ ಕೂಗುತ್ತಾ ಸ್ಮೋಕ್ ಕ್ರ್ಯಾಕರ್ ಸಿಡಿಸಿದ್ದರು.