ನವದೆಹಲಿ: ಲೋಕಸಭೆ ಕಲಾಪಕ್ಕೆ ಬುಧವಾರ ಇಬ್ಬರು ನುಗ್ಗಿ ಹಾಗೂ ಸಂಸತ್ತಿನ ಆವರಣದಲ್ಲಿ ಮತ್ತಿಬ್ಬರು ಕೋಲಾಹಲ ಎಬ್ಬಿಸಿದ ಘಟನೆ ಆತಂಕಕ್ಕೆ ಕಾರಣವಾಗಿದೆ. ಈ ಘಟನೆಯಲ್ಲಿ ನಡೆದ ಭದ್ರತಾ ಲೋಪವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದೀಗ ಒಟ್ಟು ಆರು ಜನರ ಗುಂಪು ಕೆಲ ದಿನಗಳ ಹಿಂದೆಯೇ ಕಲಾಪಕ್ಕೆ ನುಗ್ಗಲು ಸಂಘಟಿತ ಪ್ಲಾನ್ ಮಾಡಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಲೋಕಸಭೆಯಲ್ಲಿ ಸದಸ್ಯರು ಶೂನ್ಯ ವೇಳೆಯಲ್ಲಿ ಮಾತನಾಡುತ್ತಿದ್ದಾಗಲೇ ಇಬ್ಬರು ಸಾರ್ವಜನಿಕ ಗ್ಯಾಲರಿಯಿಂದ ಸದನದೊಳಗೆ ಜಿಗಿದಿದ್ದಾರೆ. ಹಳದಿ ಬಣ್ಣದ ಸ್ಟ್ರೇ ಬಿಡುಗಡೆ ಮಾಡಿ ಆತಂಕ ಸೃಷ್ಟಿಸಿದ್ದಾರೆ. ಅದೇ ಸಮಯದಲ್ಲಿ ಸಂಸತ್ತಿನ ಆವರಣದ ಹೊರಗೆ ಒಬ್ಬ ಮಹಿಳೆ ಸೇರಿದಂತೆ ಮತ್ತಿಬ್ಬರು ಘೋಷಣೆಗಳನ್ನು ಕೂಗಿ ಸ್ಟ್ರೇ ಮಾಡುತ್ತಾ ಕೋಲಾಹಲ ಉಂಟು ಮಾಡಿದ್ದಾರೆ. ಈ ಘಟನೆಯ ಆರಂಭದಲ್ಲೇ ಓರ್ವ ಮಹಿಳೆ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈಗ ಐದನೇ ವ್ಯಕ್ತಿಯನ್ನು ಸೆರೆಹಿಡಿದ್ದಾರೆ. ಅಲ್ಲದೇ, ಆರನೇ ವ್ಯಕ್ತಿಯ ಬಂಧನಕ್ಕಾಗಿ ಬಲೆಬೀಸಿದ್ದಾರೆ.
ಲೋಕಸಭೆಗೆ ನುಗ್ಗಿದ ಆರೋಪಿಗಳನ್ನು ಕರ್ನಾಟಕದ ಮೈಸೂರು ಮೂಲದ ಮನೋರಂಜನ್.ಡಿ (34) ಹಾಗೂ ಉತ್ತರ ಪ್ರದೇಶದ ಲಖನೌ ಮೂಲದ ಸಾಗರ್ ಶರ್ಮಾ (26) ಎಂದು ಗುರುತಿಸಲಾಗಿದೆ. ಸಂಸತ್ತಿನ ಹೊರಗೆ ಸಿಕ್ಕಿಬಿದ್ದಿರುವ ಆರೋಪಿಗಳನ್ನು ಮಹಾರಾಷ್ಟ್ರದ ಲಾತೂರಿನ ಅಮೋಲ್ ಶಿಂಧೆ (25) ಮತ್ತು ಹರಿಯಾಣದ ಹಿಸಾರ್ ಮೂಲದ ನೀಲಂ (42) ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದೀಗ ಇವರ ಮತ್ತಿಬ್ಬರು ಸಹಚರರನ್ನು ಲಲಿತ್ ಮತ್ತು ವಿಕ್ರಮ್ ಎಂದು ಗುರುತಿಸಲಾಗಿದೆ. ಗುರುಗ್ರಾಮದಲ್ಲಿ ವಿಕ್ರಮ್‌ನನ್ನು ಬಂಧಿಸಲಾಗಿದ್ದು, ಲಲಿತ್‌ನ ಬಂಧನಕ್ಕೆ ದೆಹಲಿ ಪೊಲೀಸ್ ತಂಡಗಳು ಬಲೆ ಬೀಸಿವೆ ಎಂದು ಮೂಲಗಳು ತಿಳಿಸಿವೆ.
ಸೋಷಿಯಲ್ ಮೀಡಿಯಾದಲ್ಲೇ ಸಿದ್ಧವಾಗಿತ್ತು ಪ್ಲಾನ್!: ಸಂಸತ್ತಿನ ಭದ್ರತಾ ಲೋಪವು ಆರು ಜನರು ಉತ್ತಮವಾಗಿ ಯೋಜಿತ ಮತ್ತು ಸಂಘಟಿತ ಘಟನೆ. ಇವರೆಲ್ಲರೂ ಇನ್ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ವೇದಿಕೆಗಳ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು. ಅಲ್ಲಿಯೇ ತಮ್ಮ ಯೋಜನೆಯನ್ನು ರೂಪಿಸಿದ್ದರು ಎಂದು ದೆಹಲಿ ಪೊಲೀಸ್ ಮೂಲಗಳು ಹೇಳಿವೆ.