ನವದೆಹಲಿ:ಅದಾನಿ ಸಮೂಹದ ವಿರುದ್ಧ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಇಂದು ಕೂಡಾ ಸಂಸತ್ ನಲ್ಲಿ ಕಲಾಪಕ್ಕೆ ಅಡ್ಡಿ ಪಡಿಸುವ ಸಾಧ್ಯತೆ ಇದೆ. ಅದಾನಿ ಕಂಪನಿಯ ವಿಷಯದ ಕುರಿತು ವಿರೋಧ ಪಕ್ಷಗಳು ಗುರುವಾರ ಕಲಾಪವನ್ನು ಸ್ಥಗಿತಗೊಳಿಸಿದ್ದವು. ಇಂದು ಕೂಡಾ ಈ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳು ಪಟ್ಟು ಹಿಡಿಯುವ ಸಾಧ್ಯತೆ ಇದೆ.
ತೃಣಮೂಲ ಕಾಂಗ್ರೆಸ್, ಡಿಎಂಕೆ ಹಾಗೂ ಎಡಪಕ್ಷಗಳು ಕಾಂಗ್ರೆಸ್ ಜತೆಗೂಡಿ ಇಂದು ಕೂಡ ಪ್ರಶ್ನಿಸಲಿದ್ದು ಕಲಾಪದಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆಗಳಿವೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ವಿರೋಧ ಪಕ್ಷಗಳು, ಸುಪ್ರೀಂ ಕೋರ್ಟ್ ಅಥವಾ ಜಂಟಿ ಸಂಸದೀಯ ಸಮಿತಿಯ ನೇತೃತ್ವದ ಭಾರತದ ಅತಿದೊಡ್ಡ ಸಂಸ್ಥೆಗಳ ವಿರುದ್ಧದ ವಂಚನೆಯ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದವು.
ಖರ್ಗೆ ನಿವಾಸದಲ್ಲಿ ಪ್ರತಿಪಕ್ಷಗಳ ಸಭೆ:ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ನಿವಾಸದಲ್ಲಿ ಸಮಾನ ಮನಸ್ಕ ಪಕ್ಷಗಳ ಮುಖಂಡರ ಸಭೆ ಕರೆದಿದ್ದು, ಮುಂದಿನ ಕಾರ್ಯತಂತ್ರದ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಮತ್ತೊಂದು ಕಡೆ ಸರ್ಕಾರ ಕಲಾಪಗಳನ್ನು ಸುಗಮವಾಗಿ ನಡೆಸಲು ಸನ್ನದ್ಧವಾಗಿದೆ. ಪ್ರತಿಪಕ್ಷಗಳು ತಮ್ಮ ಪಟ್ಟು ಸಡಿಲಿಸಿದರೆ, ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯವನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.
ಬಜೆಟ್ ಬಗ್ಗೆ ಬಿಜೆಪಿ ಸಂಸದರಿಗೆ ಸೀತಾರಾಮನ್ ಪಾಠ:ಸಂಸತ್ನಲ್ಲಿ ಎಲ್ಲ ಬಿಜೆಪಿ ಸಂಸದರಿಗೆ ಹಣಕಾಸು ಸಚಿವರು ಬಜೆಟ್ ಬಗ್ಗೆ ವಿವರಣೆ ನೀಡಲಿದ್ದಾರೆ. ಈ ಸಭೆಯಲ್ಲಿ ಪಕ್ಷದ ಎಲ್ಲ ರಾಜ್ಯಸಭಾ ಮತ್ತು ಲೋಕಸಭೆಯ ಸಂಸದರು ಉಪಸ್ಥಿತರಿರುವ ನಿರೀಕ್ಷೆಯಿದೆ. ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಕಿರಣ್ ರಿಜಿಜು ಮತ್ತು ಬಿಜೆಪಿ ಸಂಸದರಾದ ಸುಕಾಂತ ಮಜುಂದಾರ್ ಮತ್ತು ಸುಶೀಲ್ ಮೋದಿ ಅವರು ಸಂಸತ್ತಿಗೆ ಆಗಮಿಸಿದ್ದಾರೆ.