ನವದೆಹಲಿ:ಮಹಿಳೆಯರ ವಿವಾಹ ವಯೋಮಿತಿಯನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ಮಸೂದೆಯ ಪರಿಶೀಲನಾ ಸಂಸದೀಯ ಸಮಿತಿಯ ಅವಧಿಯನ್ನು ವಿಸ್ತರಿಸಲಾಗಿದೆ. ಮಸೂದೆಯ ಸಾಧಕ ಬಾಧಕಗಳನ್ನು ಚರ್ಚಿಸಿ ಅಂತಿಮ ವರದಿ ಸಲ್ಲಿಸಲು ಸಮಿತಿಗೆ ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರು ಮೂರು ತಿಂಗಳ ಹೆಚ್ಚುವರಿ ಗಡುವು ನೀಡಿದ್ದಾರೆ.
ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು, ಶಿಕ್ಷಣ, ಮಹಿಳಾ ಮತ್ತು ಮಕ್ಕಳು, ಯುವ ಮತ್ತು ಕ್ರೀಡಾ ಸಂಸದೀಯ ಸ್ಥಾಯಿ ಸಮಿತಿಗೆ ಮಹಿಳಾ ವಿವಾಹ ವಯೋಮಿತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಮಸೂದೆಯಡಿ ಅಂತಿಮ ವರದಿ ಸಲ್ಲಿಸಲು 24 ಜನವರಿ 2024 ರವರೆಗೆ ಅವಕಾಶ ನೀಡಿದ್ದಾರೆ ಎಂದು ರಾಜ್ಯಸಭೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2021 ರ ಡಿಸೆಂಬರ್ನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ಮಸೂದೆ-2021 ಅನ್ನು ಲೋಕಸಭೆಯಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆಯಾಗಿದ್ದ ಸ್ಮೃತಿ ಇರಾನಿ ಅವರು ಮಂಡಿಸಿದ್ದರು. ಇದಕ್ಕೂ ಮುನ್ನ ಕೇಂದ್ರ ಸಚಿವ ಸಂಪುಟ ತಿದ್ದುಪಡಿ ಮಸೂದೆಗೆ ಒಪ್ಪಿಗೆ ಕೂಡ ನೀಡಿತ್ತು. ಬಳಿಕ ಇದನ್ನು ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸ್ಥಾಯಿ ಸಮಿತಿಗೆ ಕಳುಹಿಸಲಾಗಿತ್ತು. ತಿದ್ದುಪಡಿ ಮಸೂದೆಯ ಅಂತಿಮ ವರದಿ ಸಲ್ಲಿಕೆಗಾಗಿ ಸಮಿತಿಯು ಮತ್ತೆ ಗಡುವನ್ನು ಪಡೆದಿದೆ.