ನವದೆಹಲಿ:ಮಣಿಪುರ ವಿಚಾರಕ್ಕೆ ಸಂಸತ್ ಅಧಿವೇಶನ ವೃಥಾ ಹಾಳಾಗುತ್ತಿದೆ. ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇಲ್ಲ ಎಂದು ವಿಪಕ್ಷಗಳು ಅವಿಶ್ವಾಸ ನಿರ್ಣಯ ಕೂಡ ಮಂಡಿಸಿವೆ. ಪ್ರಧಾನಿ ಮೋದಿ ಅವರು ಮಣಿಪುರದ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಲೇಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿದ್ದರೆ, ರಾಜ್ಯಸಭೆಯಲ್ಲಿ ಚರ್ಚೆಗೆ ಸಿದ್ಧ ಎಂದು ಬಿಜೆಪಿ ತಿರುಗೇಟು ನೀಡಿದೆ.
ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ ನಡೆಸದೆ ಸಂಸತ್ತಿಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅವಮಾನ ಮಾಡುತ್ತಿದೆ ಎಂದು ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದ್ದರೂ, ಮಸೂದೆಗಳಿಗೆ ಅಂಗೀಕಾರ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.
'ಸರ್ಕಾರ ಮೊದಲು ಅವಿಶ್ವಾಸ ಗೊತ್ತುವಳಿ ಕುರಿತು ಚರ್ಚೆ ನಡೆಸಲಿ. ಸದನದ ಇತರ ಚಟುವಟಿಕೆಗಳ ವಿರುದ್ಧ ನಾವು ಪ್ರತಿಭಟಿಸುತ್ತಿಲ್ಲ. ಅವಿಶ್ವಾಸ ಗೊತ್ತುವಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರ ಸಂಸತ್ತಿಗೆ ಅವಮಾನ ಮಾಡುತ್ತಿದೆ. ಅವಿಶ್ವಾಸ ಮಂಡಿಸಿದಾಗ್ಯೂ ವಿಧೇಯಕಗಳನ್ನು ಪಾಸು ಮಾಡಲಾಗುತ್ತಿದೆ. ಹಿಂದೆ ಇಂತಹ ಪರಿಸ್ಥಿತಿ ಇರಲಿಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದರು.
ಇಂಡಿಯಾ ಮೈತ್ರಿಕೂಟ ಮಣಿಪುರಕ್ಕೆ ಭೇಟಿ ನೀಡಿದ ಬಗ್ಗೆಯೂ ಮಾಹಿತಿ ನೀಡಿದ ಕಾಂಗ್ರೆಸ್ ಸಂಸದ, ಅಲ್ಲಿನ ಪರಿಸ್ಥಿತಿ ಭೀಕರವಾಗಿದೆ. ಮಣಿಪುರದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಆಡಳಿತ ಪಕ್ಷದ ಸಂಸದರು ಅಲ್ಲಿಗೆ ಭೇಟಿ ನೀಡಬೇಕು ಎಂದು ಒತ್ತಾಯಿಸಿದರು.
ಮೋದಿಗೆ ಪ್ರಚಾರಕ್ಕೆ ಟೈಂ ಇದೆ, ಸಂಸತ್ತಿಗೆ ಬರಲ್ಲ:ಚುನಾವಣಾ ರ್ಯಾಲಿ ಮತ್ತು ಬಿಜೆಪಿ ಸಭೆಗಳಲ್ಲಿ ಭಾಗವಹಿಸಲು ಪ್ರಧಾನಿಗೆ ಸಮಯವಿದೆ. ಆದರೆ, ಮಣಿಪುರದ ಜನರ ಸಂಕಟದ ಬಗ್ಗೆ ಮಾತನಾಡಲು ಅವರಲ್ಲಿ ಸಮಯವಿಲ್ಲ. ಮಣಿಪುರದ ಪರಿಸ್ಥಿತಿ ಸುಧಾರಿಸಲು ಮೋದಿ ಸರ್ಕಾರ ಪರಿಹಾರವೇ ಇಲ್ಲ ಎಂಬಂತೆ ವರ್ತಿಸುತ್ತಿದೆ. ಸಂಸತ್ತಿನಲ್ಲಿ ಯಾವುದೇ ಹೇಳಿಕೆ ನೀಡದಿರುವುದು ಇದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.