ನವದೆಹಲಿ : ಇಂದಿನಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಣಿಪುರದ ಪರಿಸ್ಥಿತಿ ಮತ್ತು ದೆಹಲಿ ನಾಗರಿಕ ಸೇವಾ ಸಿಬ್ಬಂದಿಯ ಸುಗ್ರೀವಾಜ್ಞೆ ಸೇರಿದಂತೆ ಹಲವು ವಿಷಯಗಳ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ. 2024ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಸವಾಲೆಸೆಯಲು 26 ವಿರೋಧ ಪಕ್ಷಗಳು ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟವನ್ನು (ಇಂಡಿಯಾ) ರಚಿಸಿರುವ ಬೆನ್ನಲ್ಲೇ ಮುಂಗಾರು ಅಧಿವೇಶನ ನಡೆಯುತ್ತಿದೆ.
ಅಧಿವೇಶನದ ವೇಳೆ ಮಣಿಪುರ ಹಿಂಸಾಚಾರ ವಿಷಯದ ಕುರಿತು ಪ್ರತಿಪಕ್ಷಗಳು ಧ್ವನಿ ಎತ್ತಲಿವೆ. ಈಶಾನ್ಯ ರಾಜ್ಯದಲ್ಲಿ ಮೇ 3ರಂದು ಪ್ರಾರಂಭವಾದ ಜನಾಂಗೀಯ ಹಿಂಸಾಚಾರದಲ್ಲಿ ಇದುವರೆಗೆ 160 ಜನರು ಸಾವನ್ನಪ್ಪಿದ್ದಾರೆ. ಹಾಗೆಯೇ, ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರದ ತಿದ್ದುಪಡಿ ಸುಗ್ರೀವಾಜ್ಞೆ ಮತ್ತು ಅದಕ್ಕೆ ಸಂಬಂಧಿಸಿದ ಮಸೂದೆಯ ವಿಷಯವು ಪ್ರಮುಖವಾಗಿ ಮುನ್ನಲೆಗೆ ಬರಲಿದ್ದು, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು (ಎಎಪಿ) ದೆಹಲಿಯಲ್ಲಿ ಅಧಿಕಾರಿಗಳ ನೇಮಕಾತಿ ಮತ್ತು ವರ್ಗಾವಣೆಯ ಸುಗ್ರೀವಾಜ್ಞೆಯನ್ನು ತೀವ್ರವಾಗಿ ವಿರೋಧಿಸುತ್ತಿದೆ.
ಅಧಿವೇಶನಕ್ಕೂ ಮುನ್ನ ಸರ್ಕಾರ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಿದ ನಂತರ ಎಎಪಿ ನಾಯಕ ಸಂಜಯ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿ, "ಸಾಂವಿಧಾನಿಕ ತಿದ್ದುಪಡಿಯ ವಿಷಯವನ್ನು ಸುಗ್ರೀವಾಜ್ಞೆಯ ಮೂಲಕ ಹೇಗೆ ಅಂಗೀಕರಿಸಬಹುದು?. ದೆಹಲಿಯ ಎರಡು ಕೋಟಿ ಜನರ ಹಕ್ಕುಗಳನ್ನು ಕಸಿದುಕೊಳ್ಳುವುದು ಮತ್ತು ಕೇಜ್ರಿವಾಲ್ ಅವರು ಸರ್ಕಾರವ ನಡೆಸಲು ಬಿಡದಿರುವುದನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಈ ಸುಗ್ರೀವಾಜ್ಞೆ ತರುವುದನ್ನು ತಮ್ಮ ಪಕ್ಷ ವಿರೋಧಿಸುತ್ತದೆ. ಫೆಡರಲ್ ರಚನೆಯನ್ನು ಹತ್ತಿಕ್ಕಲು ಈ ರೀತಿಯ ಸುಗ್ರೀವಾಜ್ಞೆ ತರುವುದು ನಾಚಿಕೆಗೇಡಿನ ಸಂಗತಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ಮತ್ತು ಡೀನ್ ಕುರಿಯೋಕೋಸ್, ಡಿಎಂಕೆಯ ಎ.ರಾಜಾ, ತೃಣಮೂಲ ಕಾಂಗ್ರೆಸ್‌ನ ಸುಗತ ರಾಯ್, ಆರ್‌ಎಸ್‌ಪಿಯ ಎನ್.ಕೆ.ಪ್ರೇಮಚಂದ್ರನ್ ಅವರು ಲೋಕಸಭೆಯಲ್ಲಿ ದೆಹಲಿ ಸರ್ಕಾರದ ತಿದ್ದುಪಡಿ ಸುಗ್ರೀವಾಜ್ಞೆ 2023 ಅನ್ನು ರದ್ದುಗೊಳಿಸುವಂತೆ ನೋಟಿಸ್ ನೀಡಿದ್ದಾರೆ. ಸರ್ವಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ಕೂಡ ಮಣಿಪುರದ ಪರಿಸ್ಥಿತಿಯ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದೊಂದಿಗೆ ಚರ್ಚೆಗೆ ಒತ್ತಾಯಿಸಿವೆ.
ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸುದ್ದಿಗಾರರೊಂದಿಗೆ ಮಾತನಾಡಿ, "ಸರ್ವಪಕ್ಷಗಳ ಸಭೆಯಲ್ಲಿ ನಾವು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಣಿಪುರದ ಪರಿಸ್ಥಿತಿಯ ಬಗ್ಗೆ ಚರ್ಚೆಗೆ ಒತ್ತಾಯಿಸಿದ್ದೇವೆ. ಪ್ರಧಾನಿ ಅವರು ಸದನಕ್ಕೆ ಬಂದು ಮಣಿಪುರದ ಪರಿಸ್ಥಿತಿಯ ಬಗ್ಗೆ ಚರ್ಚಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ" ಎಂದರು.