ನವದೆಹಲಿ:ಮುಂಗಾರುಸಂಸತ್ ಅಧಿವೇಶನದ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಪೆಗಾಸಸ್, ತೈಲ ಬೆಲೆ ಏರಿಕೆ ವಿಚಾರವನ್ನಿಟ್ಟುಕೊಂಡು ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ್ದರಿಂದ ಕಲಾಪ ಮೇಲಿಂದ ಮೇಲೆ ಮುಂದೂಡಿಕೆ ಮಾಡಲಾಗಿದೆ. ಹೀಗಾಗಿ ಇಲ್ಲಿಯವರೆಗೆ 107 ಗಂಟೆಗಳ ಪೈಕಿ ಕೇವಲ 18 ಗಂಟೆಗಳ ಕಾಲ ಮಾತ್ರ ನಡೆದಿದೆ. ಆದರೆ ಇದಕ್ಕಾಗಿ ಬರೋಬ್ಬರಿ 133 ಕೋಟಿ ರೂ. ವೆಚ್ಚವಾಗಿದೆ ಎಂದು ಸರ್ಕಾರದ ವರದಿವೊಂದರಿಂದ ತಿಳಿದು ಬಂದಿದೆ.
ಜುಲೈ 19ರಿಂದ ಮುಂಗಾರು ಅಧಿವೇಶನ ಆರಂಭಗೊಂಡಿದ್ದು, ಅದಿನಿಂದಲೂ ಪೆಗಾಸಸ್ ವಿಚಾರವಾಗಿ ಕೇಂದ್ರದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಹೀಗಾಗಿ 54 ಗಂಟೆಗಳ ಲೋಕಸಭೆಯಲ್ಲಿ ಕೇವಲ 7 ಗಂಟೆ ನಡೆದಿದ್ದು, 53 ಗಂಟೆಗಳ ರಾಜ್ಯಸಭೆಯಲ್ಲಿ 11 ಗಂಟೆಗಳ ಕಾಲ ನಡೆದಿದೆ. ಒಟ್ಟಿನಲ್ಲಿ ಸುಮಾರು 89 ಗಂಟೆಗಳ ಕಾಲ ಕಲಾಪ ಸಂಪೂರ್ಣವಾಗಿ ಪ್ರತಿಭಟನೆಯಿಂದಾಗಿ ವ್ಯರ್ಥವಾಗಿದೆ.
ಕೇಂದ್ರ ಸರ್ಕಾರ ಪೆಗಾಸಸ್ ಮೂಲಕ ಗೂಢಚರ್ಯೆ ನಡೆಸಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡಿದ್ದು, ಇದರ ತನಿಖೆಗಾಗಿ ತಂಡ ರಚನೆ ಮಾಡುವಂತೆ ಆಗ್ರಹಿಸಿದೆ. ಇದರ ಜೊತೆಗೆ ಕೃಷಿ ಮಸೂದೆ ಕಾಯ್ದೆ, ತೈಲ ಬೆಲೆ ಏರಿಕೆ, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನಿಟ್ಟುಕೊಂಡು ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾರಣ ಕಲಾಪ ಬಲಿಯಾಗುತ್ತಿದೆ. ಇದೀಗ ಉಭಯ ಸದನಗಳು ಸೋಮವಾರಕ್ಕೆ ಮುಂದೂಡಿಕೆಯಾಗಿದ್ದು, ಕೆಲ ದಿನಗಳು ಮಾತ್ರ ಬಾಕಿ ಉಳಿದಿರುವ ಕಾರಣ ಪ್ರತಿಪಕ್ಷಗಳು ತಮ್ಮ ಪಟ್ಟು ಸಡಿಲಿಸುವ ಯಾವುದೇ ಸೂಚನೆ ಕಂಡು ಬರುತ್ತಿಲ್ಲ.
ಇದನ್ನೂ ಓದಿರಿ: ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೆ ಅಡ್ಡಿಪಡಿಸಿ, ಕಾಲಿಗೆ ಸುತ್ತಿಕೊಂಡ ಹಾವು.. ವಿಡಿಯೋ ವೈರಲ್
ಪೆಗಾಸಸ್ ವಿಚಾರವಾಗಿ ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟನೆ ನೀಡಿದ್ರೂ ಕೂಡ ಸುಮ್ಮನಾಗದ ವಿಪಕ್ಷಗಳು ತಮ್ಮ ಪ್ರತಿಭಟನೆ ಮುಂದುವರೆಸಿವೆ. ಹೀಗಾಗಿ ಸ್ಪೀಕರ್ ಮೇಲಿಂದ ಮೇಲೆ ಕಲಾಪ ಮುಂದೂಡಿಕೆ ಮಾಡಿದ್ದಾರೆ.