ನವದೆಹಲಿ: ಮಂಗಳವಾರ ನಡೆದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೀಯ ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒ ಬ್ರಿಯಾನ್ ಅವರ ಟ್ವೀಟ್ ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಈ ಭಾಷೆಯ ಮೂಲಕ ಟಿಎಂಸಿ ಸಂಸತ್ತಿಗೆ ಮತ್ತು ಸಂಸದರನ್ನು ಆಯ್ಕೆ ಮಾಡಿದ ದೇಶದ ಜನರಿಗೆ ಅವಮಾನ ಮಾಡಿದೆ ಎಂದು ಪ್ರಧಾನಿ ಬಿಜೆಪಿ ಸಂಸದರಿಗೆ ಹೇಳಿದ್ದಾರೆ ಎಂದ್ದರು.
ಬಳಸಿದ ಭಾಷೆಯ ಬಗ್ಗೆ ಪ್ರಧಾನಮಂತ್ರಿಯವರು ಬೇಸರಗೊಂಡಿದ್ದಾರೆ. ಸಚಿವರ ಕೈಯಿಂದ ಕಾಗದಗಳನ್ನು ಕಸಿದುಕೊಂಡು ಚೆಲ್ಲಾಡಿದ್ದಾರೆ. ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ. ಹಾಗೂ ಘಟನೆಗೆ ಕ್ಷಮೆಯಾಚಿಸಿಲ್ಲ. ಇದು ವಿರೋಧ ಪಕ್ಷದ ಕಡೆಯಿಂದ ಅಹಂಕಾರವನ್ನು ತೋರಿಸುತ್ತದೆ ಎಂದು ಪ್ರಧಾನಿಯವರ ಹೇಳಿಕೆ ಉಲ್ಲೇಖಿಸಿ ಜೋಶಿ ವಿವರಿಸಿದರು.
ಕಳೆದ ತಿಂಗಳು 1.16 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹ ಹಾಗೂ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಪದಕ ಗೆದ್ದ ಸಂತೋಷ ಸುದ್ದಿಯೊಂದಿಗೆ ಪ್ರಧಾನಿ ಮೋದಿ ಸಂಸದೀಯ ಪಕ್ಷದ ಸಭೆಯನ್ನು ಆರಂಭಿಸಿದರೂ, ವಿಪಕ್ಷಗಳ ನಡೆಗೆ ಪ್ರಧಾನಿ ಮೋದಿ ಬೇಸರ ವ್ಯಕ್ತಪಡಿಸಿದರು ಎಂದು ಕೇಂದ್ರ ಸಚಿವ ವಿ ಮುರಳೀಧರನ್ ಹೇಳಿದರು.