ಕರ್ನಾಟಕ

karnataka

ಜನವರಿ 31ರಿಂದ ಸಂಸತ್ತಿನ ಅಧಿವೇಶನ: ಫೆಬ್ರವರಿ 1ಕ್ಕೆ ವಿತ್ತ ಸಚಿವರಿಂದ ಬಜೆಟ್​ ಮಂಡನೆ

By

Published : Jan 13, 2023, 4:12 PM IST

ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31ರಿಂದ ಏಪ್ರಿಲ್ 6ರವರೆಗೆ ಜರುಗಲಿದೆ. ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ.

parliament-budget-session-to-begin-on-jan-31-end-april-6
ಜನವರಿ 31ರಿಂದ ಸಂಸತ್ತಿನ ಅಧಿವೇಶನ: ಫೆಬ್ರವರಿ 1ಕ್ಕೆ ವಿತ್ತ ಸಚಿವೆ ನಿರ್ಮಲಾರಿಂದ ಬಜೆಟ್​ ಮಂಡನೆ

ನವದೆಹಲಿ:ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಆರಂಭವಾಗಲಿದ್ದು, ಎರಡು ಹಂತಗಳಲ್ಲಿ ನಡೆಯುವ ಈ ಅಧಿವೇಶನವು ಏಪ್ರಿಲ್ 6ರಂದು ಮುಕ್ತಾಯವಾಗಲಿದೆ. ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಮಂಡಿಸುವ ನಿರೀಕ್ಷೆ ಇದೆ. ಇದು 2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಂಡಿಸುವ ಅಂತಿಮ ಪೂರ್ಣ ಪ್ರಮಾಣದ ಬಜೆಟ್ ಸಹ ಆಗಿದೆ.

ಜನವರಿ 31ರಿಂದ ಫೆಬ್ರವರಿ 10ರವರೆಗೆ ಮೊದಲ ಹಂತದ ಬಜೆಟ್​ ಅಧಿವೇಶನ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಬಿಡುವು ಇರಲಿದೆ. ನಂತರ ಮಾರ್ಚ್ 13ರಿಂದ ಎರಡನೇ ಹಂತದ ಅಧಿವೇಶನ ಪ್ರಾರಂಭವಾಗಿ ಏಪ್ರಿಲ್ 6ರವರೆಗೆ ನಡೆಯಲಿದೆ. ಮೊದಲ ಹಂತದ ಅಧಿವೇಶನವು ರಾಷ್ಟ್ರಪತಿ ದ್ರೌಪತಿ ಮುರ್ಮು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವುದೊಂದಿಗೆ ಪ್ರಾರಂಭವಾಗಲಿದೆ. ನಂತರ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಪ್ರಧಾನಿ ಭಾಷಣ ಮಾಡಲಿದ್ದಾರೆ. ಇದರ ನಂತರ ಸದಸ್ಯರು ಎತ್ತುವ ಪ್ರಶ್ನೆಗಳಿಗೆ ಹಣಕಾಸು ಸಚಿವರು ಉತ್ತರ ನೀಡಲಿದ್ದಾರೆ.

ಸಂಸತ್ತಿನ ಬಜೆಟ್ ಅಧಿವೇಶನ ಬಗ್ಗೆ ಕೇಂದ್ರ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ ಮಾಹಿತಿ ನೀಡಿದ್ದು, ಜನವರಿ 31ರಿಂದ ಏಪ್ರಿಲ್​ 6 ರವರೆಗಿನ ಒಟ್ಟು 66 ದಿನಗಳಲ್ಲಿ 27 ದಿನಗಳ ಕಾಲ ಕಲಾಪಗಳು ನಡೆಯಲಿದೆ. ಅಮೃತ್ ಕಾಲದ ಈ ಸಮಯದಲ್ಲಿ ರಾಷ್ಟ್ರಪತಿಗಳ ಭಾಷಣ, ವಂದನಾ ನಿರ್ಣಯ, ಕೇಂದ್ರ ಬಜೆಟ್ ಮತ್ತು ಇತರ ವಿಷಯಗಳ ಕುರಿತ ಚರ್ಚೆಗಳನ್ನು ಎದುರು ನೋಡಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲದೇ, 2023ರ ಈ ಬಜೆಟ್ ಅಧಿವೇಶನದಲ್ಲಿ ಇಲಾಖೆಗಳಿಗೆ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಗಳು ಅನುದಾನದ ಬೇಡಿಕೆಗಳನ್ನು ಪರಿಶೀಲನೆ ಹಾಗೂ ತಮ್ಮ ಸಚಿವಾಲಯಗಳು ಅಥವಾ ಇಲಾಖೆಗಳಿಗೆ ಸಂಬಂಧಿಸಿದ ವರದಿಗಳನ್ನು ನೀಡಲು ಅನುವಾಗುವಂತೆ ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ವಿರಾಮ ಇರಲಿದೆ ಎಂದು ಸಚಿವ ಜೋಶಿ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಸೆಂಟ್ರಲ್ ವಿಸ್ಟಾದಲ್ಲಿ ಎರಡನೇ ಹಂತದ ಅಧಿವೇಶನ?: ಈ ಬಾರಿ ಬಜೆಟ್​ ಅಧಿವೇಶನವು ಎರಡು ಸ್ಥಳಗಳಲ್ಲಿ ನಡೆಯುವ ಸಾಧ್ಯತೆ ಇದೆ. ಮೊದಲ ಹಂತದ ಅಧಿವೇಶನವು ಈಗಿರುವ ಸಂಸತ್ ಭವನದಲ್ಲಿ ಜರುಗಲಿದೆ. ಇತ್ತ, ಹೊಸ ಸಂಸತ್ ಭವನ ಸೆಂಟ್ರಲ್ ವಿಸ್ಟಾ ಕಟ್ಟಡದ ಕಾಮಗಾರಿಯು ಭರದಿಂದ ಆಗಿದೆ. ಹೀಗಾಗಿ ಎರಡನೇ ಹಂತವನ್ನು ಹೊಸ ಸಂಸತ್​ ಕಟ್ಟಡದಲ್ಲಿ ನಡೆಸಬಹುದು ಎನ್ನಲಾಗುತ್ತಿದೆ. ಎರಡನೇ ಹಂತದಲ್ಲಿ ವಿವಿಧ ಸಚಿವಾಲಯಗಳಿಗೆ ಅನುದಾನದ ಹಂಚಿಕೆ ಮೇಲಿನ ಚರ್ಚೆ ನಡೆಯಲಿದೆ. ಬಳಿಕ ಕೇಂದ್ರ ಬಜೆಟ್​ಗೆ ಒಪ್ಪಿಗೆ ನೀಡಿ, ಹಣಕಾಸು ಮಸೂದೆ ಅಂಗೀಕರಿಸಲಾಗುತ್ತದೆ.

ಕರ್ನಾಟಕ ಸೇರಿ ದೊಡ್ಡ ರಾಜ್ಯಗಳ ಮೇಲೆ ಕಣ್ಣು?: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮಂಡಿಸುವ ಬಜೆಟ್​ ತಮ್ಮ ಐದನೇ ಬಜೆಟ್ ಆಗಿದೆ. ಮೇಲಾಗಿ ಇದು 2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ಸರ್ಕಾರ ಮಂಡಿಸುವ ಕೊನೆ ಪೂರ್ಣ ಪ್ರಮಾಣದ ಬಜೆಟ್ ಆಗಿದೆ. ಜೊತೆಗೆ ಈ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕ ಸೇರಿ ಪ್ರಮುಖ ದೊಡ್ಡ ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿದೆ. ಕರ್ನಾಟಕದೊಂದಿಗೆ ಛತ್ತೀಸ್​ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಸಹ ವಿಧಾನಸಭೆ ಚುನಾವಣೆಗಳನ್ನು ಎದುರಿಸಲಿದ್ದು, ಈ ರಾಜ್ಯಗಳ ಮೇಲೆ ಕಣ್ಣಿಟ್ಟು ಕೇಂದ್ರ ಬಜೆಟ್​ ಮಂಡನೆಯಾಗುವ ಸಾಧ್ಯತೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ:ಜನಪ್ರಿಯ ಮುಂಗಡ ಪತ್ರ ಮಂಡನೆಗೆ ಸಿಎಂ ಕಸರತ್ತು: ಫೆಬ್ರವರಿ ಎರಡನೇ ವಾರದಿಂದ ಮುಂಗಡಪತ್ರದ ಪೂರ್ವಭಾವಿ ಸಭೆ ಸಾಧ್ಯತೆ

ABOUT THE AUTHOR

...view details