ನವದೆಹಲಿ: ಪೆಗಾಸಸ್ ಸಾಫ್ಟ್‌ವೇರ್ ಬಳಸಿ ಪತ್ರಕರ್ತರು ಮತ್ತು ರಾಜಕೀಯ ಮುಖಂಡರು ಅಕ್ರಮವಾಗಿ ಗೂಢಾಚರ್ಯೆ ಮಾಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಅಧ್ಯಕ್ಷತೆಯಲ್ಲಿ ಸಂಸದೀಯ ಸ್ಥಾಯಿ ಸಮಿತಿಯು, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳನ್ನು ಪ್ರಶ್ನಿಸಲಿದೆ. ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಸಭೆಯನ್ನು ಜುಲೈ 28 ರಂದು ಕರೆಯಲಾಗಿದೆ. ಈ ವೇಳೆ ಮಾಹಿತಿ ತಂತ್ರಜ್ಞಾನ, ಗೃಹ ಮತ್ತು ಸಂವಹನ ಸಚಿವಾಲಯದ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ.
'ನಾಗರಿಕರ ದತ್ತಾಂಶ ಸುರಕ್ಷತೆ ಮತ್ತು ಗೌಪ್ಯತೆ' ಎಂಬ ವಿಷಯದ ಕುರಿತು 'ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಗೃಹ ವ್ಯವಹಾರ ಸಚಿವಾಲಯ ಮತ್ತು ಸಂವಹನ ಸಚಿವಾಲಯ (ದೂರಸಂಪರ್ಕ ಇಲಾಖೆ) ದ ಪ್ರತಿನಿಧಿಗಳ ಪುರಾವೆಗಳು ಸಭೆಯ ಕಾರ್ಯಸೂಚಿಯಾಗಿದೆ. ಸಭೆ ಸಂಜೆ 4 ಗಂಟೆಗೆ ಪ್ರಾರಂಭವಾಗಲಿದೆ. ಪ್ರಕರಣ ಬೆಳಕಿಗೆ ಬಂದಾಗಿನಿಂದ, ಹಲವಾರು ವಿರೋಧ ಪಕ್ಷದ ನಾಯಕರು ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.