ಮೊಹಾಲಿ (ಪಂಜಾಬ್): ಮೊಹಾಲಿ ಜಿಲ್ಲೆಯ ಸೆಕ್ಟರ್ - 83 ಪ್ರದೇಶದಲ್ಲಿನ ಪಾರ್ಕಿಂಗ್ ಸ್ಥಳ ಕುಸಿದು ಬಿದ್ದ ಹಲವಾರು ವಾಹನಗಳು ಹಾನಿಗೊಳಗಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಅವಶೇಷಗಳಡಿ ಹಲವಾರು ವಾಹನಗಳು ಹೂತು ಹೋಗಿದ್ದು ಅದೃಷ್ಟವಶಾತ್ ಘಟನೆ ಸಂಭವಿಸಿದ ವೇಳೆ ಯಾರೊಬ್ಬರು ಪಾರ್ಕಿಂಗ್ ಸ್ಥಳದಲ್ಲಿ ಇಲ್ಲದೇ ಇರುವುದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಅಲ್ಲದೇ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೂಲಗಳ ಪ್ರಕಾರ: ಸೆಕ್ಟರ್ 83 ಪ್ರದೇಶದಲ್ಲಿ ನಿರ್ಮಾಣ ಹಂತದ ಕಟ್ಟಡದ ನೆಲಮಾಳಿಗೆಯನ್ನು ಅಗೆಯುವ ಕಾರ್ಯ ನಡೆಯುತ್ತಿದ್ದ ವೇಳೆ ಪಾರ್ಕಿಂಗ್ ಲಾಟ್ ಕುಸಿದಿದೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರಲ್ಲಿ ಎರಡು ಕಾರುಗಳು ಪಾರ್ಕಿಂಗ್ ಕುಸಿದು ಬಿದ್ದಿರುವುದು ಕಂಡು ಬಂದಿದೆ. ಅಲ್ಲದೇ ಕೆಲವು ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಆದರೇ ಯಾವುದೆ ಪ್ರಾಣಹಾನಿ ಆಗಿರುವ ಬಗ್ಗೆ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾತನಾಡಿರುವ ಮೊಹಾಲಿ ಡಿಎಸ್‌ಪಿ ಹರ್ಸಿಮ್ರಾನ್ ಸಿಂಗ್, ಸೆಕ್ಟರ್ 83 ರ ಐಟಿ ಸಿಟಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಮಧ್ಯಾಹ್ನ 12.45 ರ ಸುಮಾರಿಗೆ ನಿರ್ಮಾಣ ಹಂತದ ಕಟ್ಟಡದ ನೆಲಮಾಳಿಗೆ ಅಗೆಯುವಾಗ ಈ ಘಟನೆ ನಡೆದಿದೆ. ಇದರಲ್ಲಿ 9 ರಿಂದ 10 ವಾಹನಗಳು ಮತ್ತು ಒಂದೆರಡು ಕಾರುಗಳು ಸಂಪೂರ್ಣವಾಗಿ ಹಾನಿಯಾಗಿವೆ.
ಅನುಮತಿ ಮಿತಿ ಮೀರಿ ಕಟ್ಟಡದ ನೆಲಮಾಳಿಗೆಯ ಭೂಮಿಯನ್ನು ಅಗೆದು ಅಡಿಪಾಯ ದುರ್ಬಲಗೊಳಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೊಣೆಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಸ್ಪಿ ಸಿಂಗ್ ತಿಳಿಸಿದ್ದಾರೆ.