ಚಂಡೀಗಢ:ನಿನ್ನೆ ನಿಧನರಾದ ಪಂಜಾಬ್ನ 5 ಬಾರಿಯ ಮುಖ್ಯಮಂತ್ರಿ, ಶಿರೋಮಣಿ ಅಕಾಲಿದಳದ ಹಿರಿಯ ರಾಜಕಾರಣಿ ಪ್ರಕಾಶ್ ಸಿಂಗ್ ಬಾದಲ್ (95) ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಂತಿನ ನಮನ ಸಲ್ಲಿಸಿದರು. ಚಂಡೀಗಢಕ್ಕೆ ಆಗಮಿಸಿದ ಪ್ರಧಾನಿ ಬಾದಲ್ರ ಅಂತಿಮ ದರ್ಶನ ಪಡೆದರು.
ಪ್ರಕಾಶ್ ಸಿಂಗ್ ಬಾದಲ್ ಅವರು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ನಿಧನರಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಬಾದಲ್ ಅವರ ಮೃತದೇಹವನ್ನು ಚಂಡೀಗಢ ಸೆಕ್ಟರ್ 28 ರ ಶಿರೋಮಣಿ ಅಕಾಲಿದಳದ ಕಚೇರಿಯಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗಿದೆ. ಗುರುವಾರ ಅವರ ಹುಟ್ಟೂರಾದ ಬಾದಲ್ನಲ್ಲಿ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
ರಾಷ್ಟ್ರೀಯ ಶೋಕಾಚರಣೆ:ದೇಶದ ಹಿರಿಯ ರಾಜಕಾರಣಿಯಾಗಿದ್ದ ಪ್ರಕಾಶ್ ಸಿಂಗ್ ಬಾದಲ್ ನಿಧನಕ್ಕೆ ಸಂತಾಪ ಸೂಚಿಸಲು ಕೇಂದ್ರ ಸರ್ಕಾರ 2 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ. ದೇಶಾದ್ಯಂತ ಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು. ಎಲ್ಲಾ ಸರ್ಕಾರಿ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
ಪಂಜಾಬ್‌ನಲ್ಲಿ ನಾಳೆ ರಜೆ:ಬಾದಲ್ ನಿಧನದ ಶೋಕಾಚರಣೆಯ ಹಿನ್ನೆಲೆಯಲ್ಲಿ ನಾಳೆ ರಾಜ್ಯದಲ್ಲಿ ರಜೆ ಘೋಷಿಸಲಾಗಿದೆ. ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳು, ಕಚೇರಿಗಳಿಗೆ ರಜೆ ನೀಡಲಾಗಿದೆ. ಜಲಂಧರ್ ಲೋಕಸಭಾ ಉಪಚುನಾವಣೆ ಘೋಷಣೆಯಾಗಿದ್ದು, ತಯಾರಿಯಲ್ಲಿದ್ದ ರಾಜಕೀಯ ಪಕ್ಷಗಳಲ್ಲಿ ಶಿರೋಮಣಿ ಅಕಾಲಿದಳವು ಎರಡು ದಿನಗಳ ಚುನಾವಣಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಬಿಜೆಪಿ ಒಂದು ದಿನದ ಕಾರ್ಯಕ್ರಮಗಳನ್ನು ಕೈಬಿಟ್ಟಿದೆ.