ಹೈದರಾಬಾದ್(ತೆಲಂಗಾಣ): ಕುಟುಂಬ ರಾಜಕಾರಣದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ಮುಂದುವರೆಸಿದ್ದಾರೆ. 'ಪರಿವಾರವಾದಿ' ಪಕ್ಷಗಳು ಕೇವಲ ರಾಜಕೀಯ ಸಮಸ್ಯೆಯಲ್ಲ, ಬದಲಾಗಿ ನಮ್ಮ ದೇಶದ ಪ್ರಜಾಪ್ರಭುತ್ವ ಮತ್ತು ಯುವಜನತೆಯ ದೊಡ್ಡ ಶತ್ರುವಾಗಿವೆ ಎಂದು ಟೀಕಾಪ್ರಹಾರ ನಡೆಸಿದರು.
ಹೈದರಾಬಾದ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ಕುಟುಂಬಕ್ಕೆ ಸಮರ್ಪಿತವಾಗಿರುವ ರಾಜಕೀಯ ಪಕ್ಷಗಳ ಮುಖವೇ ಭ್ರಷ್ಟಾಚಾರ ಎಂಬುದನ್ನು ನಮ್ಮ ದೇಶ ನೋಡಿದೆ. 'ಪರಿವಾರವಾದಿ' ಪಕ್ಷಗಳು ತಮ್ಮ ಅಭಿವೃದ್ಧಿಯ ಬಗ್ಗೆ ಮಾತ್ರ ಯೋಚಿಸುತ್ತವೆ. ಇಂತಹ ಪಕ್ಷಗಳು ಬಡವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಅಲ್ಲದೇ, ತಮ್ಮ ಕುಟುಂಬ ಮಾತ್ರವೇ ಹೇಗೆ ಅಧಿಕಾರದಲ್ಲಿ ಇರಬೇಕು ಮತ್ತು ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡಬಹುದು ಎಂಬುದರ ಮೇಲೆಯೇ ಅವರ ರಾಜಕೀಯ ಕೇಂದ್ರೀಕೃತ. ಅವರಿಗೆ ಜನರ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ ಎಂದು ತೆಲಂಗಾಣದ ಸಿಎಂ ಕೆಸಿಆರ್ ಕುಟುಂಬದ ವಿರುದ್ಧ ಪರೋಕ್ಷವಾಗಿ ಮೋದಿ ವಾಗ್ದಾಳಿ ನಡೆಸಿದರು.
ಇದೇ ವೇಳೆ 21ನೇ ಶತಮಾನದ ಭಾರತವು 'ಆತ್ಮನಿರ್ಭರ ಭಾರತ್' ಮತ್ತು 'ಮೇಕ್ ಇನ್ ಇಂಡಿಯಾ' ಕನಸಿನೊಂದಿಗೆ ಮುನ್ನಡೆಯುತ್ತಿದೆ. ನಮ್ಮ ಸ್ಟಾರ್ಟ್‌ಅಪ್‌ಗಳು ಪ್ರಪಂಚದ ಮೇಲೆ ಪ್ರಭಾವ ಬೀರುತ್ತಿವೆ. ಇಂದು ನಾವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ವ್ಯವಸ್ಥೆ ಹೊಂದಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ:'ಯುಪಿ ಆರ್ಥಿಕತೆಯನ್ನು ಒಂದು ಶತಕೋಟಿ ಡಾಲರ್‌ಗೆ ಕೊಂಡೊಯ್ಯುವ ಗುರಿ'