ನಾಸಿಕ್(ಮಹಾರಾಷ್ಟ್ರ):ನೆರೆ ರಾಜ್ಯ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ.ಪ್ರೇಮ ಪ್ರಕರಣದಲ್ಲಿ ಮಗಳು ಅಪಹರಣವಾದ ಒಂದು ಗಂಟೆಯೊಳಗೆ ಪೋಷಕರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದ್ರಿಕ್ತಗೊಂಡ ಯುವತಿಯ ಸಂಬಂಧಿಕರು ಶಂಕಿತ ಆರೋಪಿಯ ಮನೆಯ ಮುಂದೆ ಶವಗಳನ್ನು ಸುಟ್ಟುಹಾಕಿದ್ದಾರೆ.
ಇಲ್ಲಿನ ಭರ್ವೀರ್ ಬುದ್ರುಕ್ ಗ್ರಾಮದಲ್ಲಿ ಭಾನುವಾರ ಈ ಭೀಕರ ಘಟನೆ ವರದಿಯಾಗಿದೆ. ಯುವತಿಯನ್ನು ಅಪಹರಿಸಿದ ಆರೋಪಿಯನ್ನು ಸಾಧನ್ ಝಂಕರ್ ಎಂದು ಗುರುತಿಸಲಾಗಿದೆ. ಕಿಸಾನ್ ಖತಲೆ (49) ಮತ್ತು ಮಂಜುಳಾ ಖತಲೆ (40) ಎಂಬುವವರೆ ಆತ್ಮಹತ್ಯೆ ಶರಣಾದವರು. ಆರೋಪಿಯು ಖತಲೆ ದಂಪತಿಯ 19 ವರ್ಷದ ಪುತ್ರಿಯನ್ನು ಪ್ರೀತಿಸುತ್ತಿದ್ದ, ಆದರೆ ಯುವತಿ ಈತನನ್ನು ಪ್ರೀತಿಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಸಹಚರರೊಂದಿಗೆ ಸೇರಿ ಯುವತಿಯನ್ನು ಅಪಹರಿಸಿದ್ದಾನೆ ಎಂದು ಹೇಳಲಾಗಿದೆ.
ನಡೆದಿದ್ದೇನು?: ಖತಲೆ ದಂಪತಿಯ ಪುತ್ರಿಯನ್ನು ಪ್ರೀತಿಸುತ್ತಿದ್ದ ಆರೋಪಿ ಸಾಧನ್ ಝಂಕರ್ ತನ್ನನ್ನು ಮದುವೆಯಾಗುವಂತೆ ಆಕೆಯನ್ನು ಪೀಡಿಸುತ್ತಿದ್ದ. ಅಲ್ಲದೇ ಆಕೆಯ ಮೇಲೆ ಪದೆ ಪದೆ ಒತ್ತಡ ಹೇರುತ್ತಿದ್ದ. ಆದರೂ ಯುವತಿ ಸಮ್ಮತಿಸಿರಲಿಲ್ಲ ಎಂದು ತಿಳಿದು ಬಂದಿದೆ. ಇದರ ನಡುವೆ ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಯುವತಿ ತನ್ನ ಪೋಷಕರೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಳು. ಈ ಸಮಯ ಸಾಧಿಸಿದ ಆರೋಪಿ ಕಾರಿನಲ್ಲಿ ತನ್ನ ಸಹಚರರೊಂದಿಗೆ ಬಂದಿದ್ದಾನೆ. ಈ ವೇಳೆ, ನಾಸಿಕ್‌ನ ಘೋಟಿ - ಪಂಧುರ್ಲಿ ಹೆದ್ದಾರಿಯಲ್ಲಿ ಬೈಕ್ ಅಡ್ಡಗಟ್ಟಿದ್ದಾನೆ. ಇದಲ್ಲದೆ ಆಕೆಯ ಪೋಷಕರಿಗೂ ಆರೋಪಿಗಳು ಥಳಿಸಿದ್ದಾರೆ. ನಂತರ ಯುವತಿಯನ್ನು ಅಲ್ಲಿಂದ ಅಪಹರಿಸಿದ್ದಾರೆ ಎಂದು ತಿಳಿದು ಬಂದಿದೆ.