ನವದೆಹಲಿ: 'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿ ದೇಶದ ಎಲ್ಲ ರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಅನೇಕ ವಿಚಾರಗಳನ್ನು ಹಂಚಿಕೊಂಡಿರುವ ಅವರು, ಮಕ್ಕಳು, ಪೋಷಕರಿಗೆ ಅನೇಕ ರೀತಿಯ ಕಿವಿಮಾತುಗಳನ್ನು ಹೇಳಿದರು. ತಮ್ಮ ಕನಸುಗಳಿಗೋಸ್ಕರ ಮಕ್ಕಳ ಮೇಲೆ ಪೋಷಕರು ಒತ್ತಡ ಹಾಕಬಾರದು ಎಂದು ಹೇಳಿದ್ದು, ಭವಿಷ್ಯದ ಬಗ್ಗೆ ಮುಕ್ತರಾಗಿ ನಿರ್ಧಾರ ಕೈಗೊಳ್ಳುವ ಅವಕಾಶವನ್ನು ನೀಡಬೇಕು ಎಂದರು.
ನಿಮ್ಮ ನಿರೀಕ್ಷೆಗಳು ಈಡೇರದ ಕಾರಣ ಅವುಗಳನ್ನು ಮಕ್ಕಳ ಮೇಲೆ ಹಾಕುವುದು ಸರಿಯಲ್ಲ. ಪ್ರತಿಯೊಂದು ಮಗುವಿನಲ್ಲೂ ವಿಶಿಷ್ಟವಾದ ಪ್ರತಿಭೆ ಇದ್ದೇ ಇರುತ್ತದೆ. ಅವುಗಳನ್ನು ಹುಡುಕುವ ಕೆಲಸವಾಗಬೇಕು. ಕಾಲಕಾಲಕ್ಕೆ ತಕ್ಕಂತೆ ಹೊಸ ಹೊಸ ಅವಕಾಶ ಲಭ್ಯವಾಗ್ತಿದ್ದು, ಇಂದು ಇಂಟರ್ನೆಟ್ ಬಳಕೆ ಮಾಡಿಕೊಂಡು ಪಾಠ ಕಲಿಯಲು ಸಾಧ್ಯವಾಗ್ತಿದೆ. ಡಿಜಿಟಲ್ ಮಾಧ್ಯಮದಿಂದ ಕಲಿಕಾ ವಿಧಾನ ಕೂಡ ಬದಲಾಗಿದ್ದು, ಆನ್ಲೈನ್ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ಪರೀಕ್ಷೆಗಳಿಂದ ಯಾವುದೇ ಕಾರಣಕ್ಕೂ ಹೆದರಬೇಡಿ. ಅವುಗಳೊಂದಿಗೆ ಮಾತನಾಡಿ. ಒತ್ತಡಗಳನ್ನು ಮೆಟ್ಟಿ ನಿಲ್ಲುವ ಕಲೆ ಕರಗತ ಮಾಡಿಕೊಳ್ಳುವಂತೆ ಮನವಿ ಮಾಡಿದ ನಮೋ, ಪರೀಕ್ಷೆಗಳೇ ನಿಮಗೆ ಹೆದರಬೇಕು, ಆ ರೀತಿಯಲ್ಲಿ ನಿಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ ಎಂದರು.