ಜಗ್ತಿಯಾಲ್ (ತೆಲಂಗಾಣ): ಪ್ರೀತಿಸಿದ ಯುವಕನನ್ನೇ ಮಗಳು ಮದುವೆಯಾಗಿದ್ದಕ್ಕೆ, ಪೋಷಕರು ಆಕೆಯ ತಲೆಯನ್ನು ಬೋಳಿಸಿರುವ ವಿಚಿತ್ರ ಘಟನೆ ತೆಲಂಗಾಣದ ಜಗ್ತಿಯಾಲ್ನಲ್ಲಿ ನಡೆದಿದೆ.
ನಡೆದಿದ್ದೇನು.. ಮದುವೆಯಾಗಿ ಅತ್ತೆಯ ಮನೆ ಸೇರಿದ್ದ ಯುವತಿಯನ್ನು ಅಪಹರಿಸಿ, ಕಾರಿನಲ್ಲಿ ಕರೆದೊಯ್ಯಲಾಗಿದೆ. ಒಂದು ರಾತ್ರಿಯಿಡಿ ಆಕೆಯ ಮನಸ್ಸನ್ನು ಬದಲಾಯಿಸಲು ಕುಟುಂಬಸ್ಥರು ಪ್ರಯತ್ನಿಸಿದ್ದಾರೆ. ಆದ್ರೆ ಆಕೆ ಮನಸ್ಸನ್ನು ಬದಲಾಯಿಸಿಲ್ಲ. ಹಾಗಾಗಿ ಮಗಳ ತಲೆಯನ್ನೇ ಬೋಳಿಸುವ ಮೂಲಕ ಅಮಾನವೀಯವಾಗಿ ವರ್ತಿಸಿದ್ದಾರೆ. ಬಳಿಕ ಆಕೆಯನ್ನು ಬಿಟ್ಟಿದ್ದಾರೆ. ಈ ಘಟನೆ ನಂತರ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಜಗ್ತಿಯಾಲ್ ಗ್ರಾಮಾಂತರ ಪೊಲೀಸರ ವರದಿ ಪ್ರಕಾರ, ಜಗ್ತಿಯಾಲ್ ಜಿಲ್ಲೆಯ ಬಾಳಪಲ್ಲಿ ಗ್ರಾಮಾಂತರ ಮಂಡಲದ ಜಕ್ಕುಳ ಮಧು (23) ಮತ್ತು ರಾಯ್ಕಲ್ ಮಂಡಲದ ಇಟಿಕ್ಯಾಳದ ಜುವ್ವಾಜಿ ಅಕ್ಷಿತಾ (20) ಪರಸ್ಪರ ಪ್ರೀತಿಸುತ್ತಿದ್ದರು. ಪೋಷಕರು ನಿರಾಕರಿಸಿದ ನಂತರವೂ ಇಬ್ಬರು ರಹಸ್ಯವಾಗಿ ಮದುವೆಯಾಗಿದ್ದರು. ಭಾನುವಾರ ಸಂಜೆ ಅಕ್ಷಿತಾ ಅವರ ಅತ್ತೆ ಮನೆಯಲ್ಲಿದ್ದಾಗ ಎರಡು ಕಾರುಗಳಲ್ಲಿ ಬಂದ ಆಕೆಯ ಕುಟುಂಬಸ್ಥರು ಮನೆಯವರ ಮೇಲೆ ಹಲ್ಲೆ ನಡೆಸಿ ಯುವತಿಯನ್ನು ಅಪಹರಿಸಿದ್ದಾರೆ. ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ತೀವ್ರವಾಗಿ ಥಳಿಸಿದ್ದಾರೆ. ಆಕೆಯ ಕಿರುಚಾಟದ ನಡುವೆಯೂ ಅವರು ಆಕೆಯ ತಲೆ ಬೋಳಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಇಸ್ಲಾಂಗೆ ಮತಾಂತರ ಆಗುವಂತೆ ಬಲವಂತ.. ಮುಸ್ಲಿಂ ವಕೀಲರ ವಿರುದ್ಧ ಹಿಂದೂ ಮಹಿಳೆ ದೂರು
ಯುವತಿ ಸೋಮವಾರ ಜಗ್ತಿಯಾಲ್ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿ ಘಟನೆ ಬಗ್ಗೆ ಪೊಲೀಸರಿಗೆ ವಿವರಿಸಿದ್ದಾಳೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಐ ಅನಿಲ್ ಅವರು ಸಂತ್ರಸ್ತೆಗೆ ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಯುವತಿಯನ್ನು ಈಗಾಗಲೇ ಆಕೆಯ ಪತಿಗೆ ಒಪ್ಪಿಸಲಾಗಿದ್ದು, ಆಕೆಯ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.