ಹೈದರಾಬಾದ್(ತೆಲಂಗಾಣ):ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದ ಮಗನಿಗೆ ಹೆತ್ತವರು ಬುದ್ಧಿವಾದ ಹೇಳಿ ಬೇಸತ್ತಿದ್ದರು. ಮಗನ ಈ ದುಶ್ಚಟ ಕುಟುಂಬಕ್ಕೆ ಕಂಟಕವಾಗಿತ್ತು. ದಾರಿ ತಪ್ಪಿದ ಮಗನ ಕಿರುಕುಳಕ್ಕೆ ನೊಂದಿದ್ದ ತಂದೆ - ತಾಯಿಯೇ ಆತನ ಅಂತ್ಯಕ್ಕೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾರೆ. ಪ್ರಕರಣ ಬೇಧಿಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಈ ಘಟನೆ ನಡೆದಿದ್ದು ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯಲ್ಲಿ. ಹೆಣವೊಂದು ಮೂಸಿ ನದಿಯಲ್ಲಿ ತೇಲಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಾಯಿನಾಥ್(26)ಮೃತ ವ್ಯಕ್ತಿ.
ಪ್ರಕರಣದ ಹಿನ್ನೆಲೆ:ಖಮ್ಮಂ ಜಿಲ್ಲೆಯ ನಿವಾಸಿಗಳಾದ ರಾಮ್ ಸಿಂಗ್ ಮತ್ತು ರಾಣಿಬಾಯಿ ದಂಪತಿಯ ಮಗನಾಗಿದ್ದ ಸಾಯಿನಾಥ್ ಕಳೆದ ನಾಲ್ಕು ವರ್ಷಗಳಿಂದ ವಿಪರೀತ ಕುಡಿತದ ದಾಸನಾಗಿದ್ದ. ಕೆಲಸ ಮಾಡದೇ ಮದ್ಯದ ನಶೆಯಲ್ಲೇ ಇರುತ್ತಿದ್ದ ಈತ, ಕುಡಿತದ ಹಣಕ್ಕಾಗಿ ಹೆತ್ತವರನ್ನು ಪೀಡಿಸುತ್ತಿದ್ದ. ಆರಂಭದಿಂದಲೂ ಬುದ್ಧಿವಾದ ಹೇಳುತ್ತಿದ್ದ ಹೆತ್ತವರ ಮಾತಿಗೆ ಈತ ಸೊಪ್ಪು ಹಾಕಿಲ್ಲ.
ಹಣಕ್ಕಾಗಿ ಪೋಷಕರಿಗೆ ಕಿರುಕುಳ:ಕುಡಿಯದೇ ಬದುಕುವುದೇ ಇಲ್ಲ ಎಂಬಂತೆ ಆಡುತ್ತಿದ್ದ ಸಾಯಿನಾಥ್, ಮದ್ಯ ಖರೀದಿಗಾಗಿ ಹಣಕ್ಕೆ ಪೋಷಕರನ್ನು ದಿನವೂ ಪೀಡಿಸುತ್ತಿದ್ದ. ಮನೆಯ ಹೊಣೆ ಹೊರಬೇಕಿದ್ದ ಮಗನೇ ದುಡಿದು ತಿನ್ನುತ್ತಿದ್ದ ಹೆತ್ತವರಿಗೆ ವಿಲನ್ ಆಗಿದ್ದ. ಹಣಕ್ಕಾಗಿ ತಂದೆ- ತಾಯಿಯನ್ನು ಚಿತ್ರಹಿಂಸೆ ನೀಡುತ್ತಿದ್ದ. ಇದರಿಂದ ಪೋಷಕರು ತೀವ್ರ ಬೇಸರಗೊಂಡಿದ್ದರು.