ಹರಿದ್ವಾರ(ಉತ್ತರಾಖಂಡ):ಹರಿದ್ವಾರದ ಜಿಲ್ಲಾ ನ್ಯಾಯಾಲಯದಲ್ಲಿ ವಿಶಿಷ್ಟ ಮತ್ತು ವಿಚಿತ್ರ ಪ್ರಕರಣವೊಂದು ದಾಖಲಾಗಿದ್ದು, ವೃದ್ಧ ದಂಪತಿ ತಮ್ಮ ಮಗ ಮತ್ತು ಸೊಸೆಯಿಂದ ವಿಭಿನ್ನ ಬೇಡಿಕೆಯೊಂದಿಗೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬೇಡಿಕೆ ಈಡೇರಿಸುವಲ್ಲಿ ವಿಫಲರಾದರೆ ತಮಗೆ 5 ಕೋಟಿ ರೂಪಾಯಿ ಪರಿಹಾರದ ರೂಪದಲ್ಲಿ ನೀಡುವಂತೆ ಕೋರ್ಟ್ನಲ್ಲಿ ದೂರು ದಾಖಲಿಸಿದ್ದಾರೆ.
ಏನಿದು ಕೇಸ್: ಹರಿದ್ವಾರದ ನಿವಾಸಿ ಸಂಜೀವ್ ರಂಜನ್ ಪ್ರಸಾದ್ BHELನಿಂದ ಈಗಾಗಲೇ ನಿವೃತ್ತಿ ಪಡೆದುಕೊಂಡಿದ್ದು, ಸದ್ಯ ಪತ್ನಿ ಸಾಧನಾ ಜೊತೆ ಹೌಸಿಂಗ್ ಸೊಸೈಟಿಯಲ್ಲಿ ವಾಸವಾಗಿದ್ದಾರೆ. ಈ ದಂಪತಿ ತಮ್ಮ ಏಕೈಕ ಪುತ್ರ ಶ್ರೇಯ್ ಸಾಗರ್ ಅವರಿಗೆ ನೋಯ್ಡಾ ನಿವಾಸಿ ಶುಭಾಂಗಿ ಸಿನ್ಹಾ ಜೊತೆ 2016ರಲ್ಲಿ ವಿವಾಹ ಮಾಡಿಸಿದ್ದರು. ಶ್ರೇಯ್ ಪೈಲಟ್ ಆಗಿದ್ದರೆ, ಶುಭಾಂಗಿ ನೋಯ್ಡಾದಲ್ಲಿ ಕೆಲಸ ಮಾಡ್ತಿದ್ದಾರೆ.
ಮದುವೆಯಾಗಿ ಆರು ವರ್ಷ ಕಳೆದರೂ ಇವರಿಗೆ ಮಕ್ಕಳಾಗಿಲ್ಲ. ಅದಕ್ಕಾಗಿ ಇಬ್ಬರೂ ಯಾವುದೇ ರೀತಿಯ ಪ್ಲಾನಿಂಗ್ ಮಾಡ್ತಿಲ್ಲ ಎಂದು ಆರೋಪ ಮಾಡಿರುವ ವೃದ್ಧ ದಂಪತಿ ಇದೀಗ ಹರಿದ್ವಾರ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ತಮಗೆ ಒಂದು ವರ್ಷದೊಳಗೆ ಮೊಮ್ಮಕ್ಕಳನ್ನ ನೀಡುವಂತೆ ಅಥವಾ ತಾವು ಖರ್ಚು ಮಾಡಿರುವ 5 ಕೋಟಿ ರೂಪಾಯಿ ಹಣವನ್ನು ಪರಿಹಾರ ರೂಪದಲ್ಲಿ ವಾಪಸ್ ನೀಡುವಂತೆ ದೂರು ದಾಖಲಿಸಿದ್ದಾರೆ.