ನೆಲ್ಲೂರು(ಆಂಧ್ರಪ್ರದೇಶ): ದೇಶಾದ್ಯಂತ ನವರಾತ್ರಿ ಸಂಭ್ರಮ ಮನೆಮಾಡಿದೆ. ದೇಗುಲಗಳು ಮದುವಣಗಿತ್ತಿಯಂತೆ ಶೃಂಗಾರಗೊಂಡಿವೆ. ಪ್ರಮುಖವಾಗಿ ದುರ್ಗಾದೇವಿ ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡುವ ಕಾರಣ, ಬಗೆ ಬಗೆಯ ಹೂವುಗಳಿಂದ ದೇವಿಯ ಮೂರ್ತಿ ಅಲಂಕಾರ ಮಾಡುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಂದು ದೇವಸ್ಥಾನ ನೋಟುಗಳಿಂದಲೇ ಶೃಂಗಾರಗೊಂಡಿದೆ.
5.16 ಕೋಟಿ ರೂ. ಗರಿ ಗರಿ ಕರೆನ್ಸಿಯಿಂದ ಅಲಂಕೃತಗೊಂಡ ಪರಮೇಶ್ವರಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿ ವರ್ಷ ದಸರಾ ಹಬ್ಬ ಅದ್ದೂರಿಯಾಗಿ ನಡೆಯುತ್ತದೆ. ಈ ಸಲ ಕೂಡ ಸಂಭ್ರಮದ ಆಚರಣೆ ಆರಂಭಗೊಂಡಿದೆ. ದೇವಿಯ ಗರ್ಭಗುಡಿ ಬರೋಬ್ಬರಿ 5.16 ಕೋಟಿ ರೂ. ನೋಟುಗಳಿಂದ ಅಲಂಕಾರಗೊಂಡಿದೆ.
ಕನ್ನಿಕಾ ಪರಮೇಶ್ವರಿ ದೇವಸ್ಥಾನವನ್ನ 7 ಕೆಜಿ ಚಿನ್ನ, 60 ಕೆಜಿ ಬೆಳ್ಳಿ ಹಾಗೂ 2000, 500, 200, 100, 50, 20, 10 ರೂಪಾಯಿ ಹೊಸ ನೋಟುಗಳಿಂದ ಅಲಂಕಾರ ಮಾಡಲಾಗಿದೆ. ನೂರಕ್ಕೂ ಅಧಿಕ ಸ್ವಯಂ ಸೇವಕರು ದೇವಸ್ಥಾನವನ್ನ ನೋಟುಗಳಿಂದ ಅಲಂಕಾರ ಮಾಡಿದ್ದಾರೆ. ದೇವಸ್ಥಾನ ಸಮಿತಿ ಅಧ್ಯಕ್ಷರು ಪ್ರತಿದಿನ ವಿಶೇಷ ಪ್ರಾರ್ಥನೆ ಮಾಡ್ತಿದ್ದಾರೆ.
ಇದನ್ನೂ ಓದಿರಿ:ರಾಜ್ಯದಲ್ಲೂ 100ರ ಗಡಿ ದಾಟಿದ ಡೀಸೆಲ್... ನಿಮ್ಮ ಜಿಲ್ಲೆಯಲ್ಲಿ ತೈಲ ಬೆಲೆ ಹೀಗಿದೆ
ಸುಮಾರು 140 ವರ್ಷಗಳ ಹಳೆಯದಾದ ಪ್ರಸಿದ್ಧ ದೇವಸ್ಥಾನ ಇದಾಗಿದೆ. ಪ್ರತಿ ವರ್ಷ ಕೋಟ್ಯಂತರ ರೂ. ಚಿನ್ನಾಭರಣಗಳಿಂದ ಅಲಂಕಾರ ಮಾಡುತ್ತಾರೆ. ಕಳೆದ ವರ್ಷ 4.5 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳಿಂದ ಶೃಂಗಾರ ಮಾಡಲಾಗಿತ್ತು. ವಿಶೇಷವೆಂದರೆ ಈ ದೇವಸ್ಥಾನಕ್ಕೆ ಭಾರತ ಮಾತ್ರವಲ್ಲದೇ ಹೊರ ದೇಶದ ಭಕ್ತರು ದೇಣಿಗೆ ನೀಡುತ್ತಾರೆ.