ಮುಂಬೈ: ಶಿವಸೇನೆ ಶಾಸಕಿ ಗೀತಾ ಜೈನ್ ಸಹೋದರ ಸಂಜಯ್ ಪುನ್ಮಿಯಾ ಮತ್ತು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ವಿರುದ್ಧ ದೊಡ್ಡ ಆರೋಪ ಮಾಡಿದ ಬಿಲ್ಡರ್ವೊಬ್ಬರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ವಿರುದ್ಧ ಸುಲಿಗೆ ದೂರು ದಾಖಲಿಸಿರುವ ಬಿಲ್ಡರ್, ನನ್ನ ಮಾಜಿ ವ್ಯವಹಾರ ಪಾಲುದಾರ ಪುನ್ಮಿಯಾ ಮತ್ತು ಸಿಂಗ್ ಅವರ ಆಪ್ತ ಸಹಚರರೊಂದಿಗಿನ ಮಾರ್ಚ್ನಲ್ಲಿ ಮೀಟಿಂಗ್ ನಡೆದಿತ್ತು.
ಈ ಮೀಟಿಂಗ್ನಲ್ಲಿ ಎನ್‌ಐಎ ತನಿಖೆ ತಂಡ ಮಹಾರಾಷ್ಟ್ರದ ನಾಲ್ಕರಿಂದ ಐದು ಮಂತ್ರಿಗಳ ಬಗ್ಗೆ ವಿಚಾರಣೆ ನಡೆಸಲಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರ ಬೀಳಲಿದೆ ಸಿಂಗ್ ಅವರ ಆಪ್ತರ ಲೆಕ್ಕಚಾರವಾಗಿದೆ ಎಂದು ಬಿಲ್ಡರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಅಂತಾ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಿಲ್ಡರ್ ಶ್ಯಾಮ್‌ಸುಂದರ್ ಅಗರ್ವಾಲ್ರಿಂದ 15 ಕೋಟಿ ಬೇಡಿಕೆ ಇಟ್ಟಿದ್ದರು ಎಂಬ ಆರೋಪದಡಿ ಮುಂಬೈ ಮಾಜಿ ಆಯುಕ್ತ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣವನ್ನು ದಕ್ಷಿಣ ಮುಂಬೈನ ಮೆರೈನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಬುಧವಾರ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಅಗರ್‌ವಾಲ್ ಅವರ ಮಾಜಿ ಪಾಲುದಾರ ಸಂಜಯ್ ಪುನ್ಮಿಯಾ (55) ಮತ್ತು ಅವರ ಸಹಾಯಕ ಸುನಿಲ್ ಜೈನ್ (45) ನನ್ನು ಬಂಧಿಸಲಾಗಿದೆ.
ಅಗರ್ವಾಲ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪರಂಬೀರ್ ಸಿಂಗ್ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿದ್ದಾರೆ. ಅಗರ್ವಾಲ್ ದೂರಿನ ಪ್ರಕಾರ, 2011 ರಲ್ಲಿ ವಿವಾದಗಳಿಂದಾಗಿ ನನ್ನ ಮತ್ತು ಪುನ್ಮಿಯಾ ಪಾಲುದಾರಿಕೆ ಕೊನೆಗೊಂಡಿತು. ಬಳಿಕ ನನ್ನ ವಿರುದ್ಧ ಪುನ್ಮಿಯಾ ಸುಲಿಗೆ ಮತ್ತು ವಂಚನೆ ಸೇರಿದಂತೆ ಕನಿಷ್ಠ 18 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.